ವರುಣ್ ಗಾಂಧಿ ವಿರುದ್ದ ಮತ್ತೆರಡು ಪ್ರಕರಣ ದಾಖಲು
ನವದೆಹಲಿ, ಮಾ. 19 : ಕೋಮು ಭಾವನೆ ಕೆರಳಿಸುವ ಭಾಷಣಕ್ಕೆ ಸಂಬಂಧಿಸಿದಂತೆ ಪಿಲಿಭಿತ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವರುಣ್ ಗಾಂಧಿ ವಿರುದ್ಧ ಮತ್ತೆರೆಡು ಪ್ರಕರಣಗಳನ್ನು ದಾಖಲಿಸಲಾಗಿದೆ. ಅಲ್ಲದೇ 24 ಗಂಟೆಯಲ್ಲಿ ಈ ಬಗ್ಗೆ ಮಾಹಿತಿ ನೀಡುವಂತೆ ಕಾರಣ ಕೇಳಿರುವ ಚುನಾವಣೆ ಆಯೋಗ, ವರುಣ್ ಹಾಗೂ ಉತ್ತರ ಪ್ರದೇಶದ ಬಿಜೆಪಿ ಘಟಕಕ್ಕೆ ನೋಟಿಸ್ ಜಾರಿ ಮಾಡಿದೆ. ಮಾರ್ಚ್ 20 ರಂದು 11 ಗಂಟೆಯೊಳಗೆ ವಿವರಣೆ ನೀಡುವಂತೆ ಆಯೋಗ ಸೂಚನೆ ನೀಡಿದೆ.
ಈಗಾಗಲೇ ಪಕ್ಷ ಹಿರಿಯ ನಾಯಕರಾದ ಅರುಣ್ ಜೈಟ್ಲಿ ಹಾಗೂ ರಾಜನಾಥ್ ಸಿಂಗ್ ಅವರ ಮುಸುಕಿನ ಗುದ್ದಾಟದಿಂದ ಪ್ರತಿಪಕ್ಷಗಳ ಎದುರು ನಗೆಪಾಟಲಿಗೆ ಈಡಾಗಿದೆ. ಇದೀಗ ಬಿಜೆಪಿ ಅಭ್ಯರ್ಥಿ ವರುಣ್ ಗಾಂಧಿ ಅಲ್ಪಸಂಖ್ಯಾತರ ಮೇಲೆ ಸಿಡಿಸಿರುವ ಬಾಂಬ್ ಪಕ್ಷದ ಇಮೇಜಿಗೆ ಭಾರಿ ಪೆಟ್ಟು ಬೀಳುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಈ ಮಧ್ಯೆ ಬಿಜೆಪಿ ವಕ್ತಾರ ರವಿಶಂಕರ ಪ್ರಸಾದ್, ವರುಣ್ ಹೇಳಿಕೆ ಪಕ್ಷಕ್ಕೆ ಸಂಬಂಧಿಸಿದ್ದಲ್ಲ ಎಂದು ಹೇಳಿದರೆ, ವರುಣ್ ಹೇಳಿಕೆಯಲ್ಲಿ ತಪ್ಪೇನು ಇಲ್ಲ ಎನ್ನುವ ಅರ್ಥದಲ್ಲಿ ಪಕ್ಷದ ಇನ್ನೊಬ್ಬ ಮುಖಂಡ ವೆಂಕಯ್ಯ ನಾಯ್ಡು ಹೇಳಿದ್ದಾರೆ.
ವರುಣ್ ಗಾಂಧಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿರುವ ಚುನಾವಣೆ ಆಯೋಗ, ಮಾರ್ಚ್ 20 ರಂದು 11 ಗಂಟೆಯೊಳಗೆ ಭಾಷಣಕ್ಕೆ ಸಂಬಂಧಿಸಿದಂತೆ ವಿವರಣೆ ನೀಡುವಂತೆ ಆದೇಶಿಸಿದೆ. ಕೋಮು ಭಾವನೆ ಕೆರಳಿಸಿರುವುದು ಸಾಬೀತಾಗಿದೆ. ನಿಮ್ಮ ವಿರುದ್ದ ಯಾಕೆ ಕ್ರಮ ಕೈಗೊಳ್ಳಬಾರದು ಎಂದು ಆಯೋಗ ಪ್ರಶ್ನಿಸಿದೆ. ಒಟ್ಟಿನಲ್ಲಿ ವರುಣ್ ಮಾಡಿದ ಬಾನಾಗಡಿ ಸದ್ಯಕ್ಕೆ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ.
(ದಟ್ಸ್ ಕನ್ನಡ ವಾರ್ತೆ)
ವರುಣ್ ಗಾಂಧಿ ಹೇಳಿಕೆಗೆ ಸಹಮತವಿಲ್ಲ, ಬಿಜೆಪಿ











Click it and Unblock the Notifications