ರಾಘವೇಂದ್ರ ಸ್ಪರ್ಧೆ, ಹೈಕಮಾಂಡ್ ತೀರ್ಮಾನ, ಸಿಎಂ
ನವದೆಹಲಿ, ಮಾ. 5 : ಪಕ್ಷದ ವರಿಷ್ಠರು ತಯಾರಿಸಿರುವ ಲೋಕಸಭೆ ಅಭ್ಯರ್ಥಿಗಳ ಸಂಭವನೀಯರ ಪಟ್ಟಿಯಲ್ಲಿ ತಮ್ಮ ಪುತ್ರ ರಾಘವೇಂದ್ರನ ಹೆಸರು ಇರುವುದು ನಿಜ. ಆದರೆ, ಅದರಲ್ಲಿ ನನ್ನ ಕೈವಾಡವೇನೂ ಇಲ್ಲ. ವರಿಷ್ಠರ ತೀರ್ಮಾನವೇ ಅಂತಿಮ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದರು.
ನವದೆಹಲಿಯಲ್ಲಿ ಲೋಕಸಭೆ ಚುನಾವಣೆ ಸ್ಪರ್ಧಿಸುವ ಅಭ್ಯರ್ಥಿಗಳ ಅಂತಿಮ ಪಟ್ಟಿ ತಯಾರಿಸಲು ಕರೆಯಲಾಗಿರುವ ಸಭೆಯಲ್ಲಿ ಭಾಗವಹಿಸಿರುವ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು. ಶಿವಮೊಗ್ಗ ಲೋಕಸಭೆ ಕ್ಷೇತ್ರಕ್ಕೆ ತಮ್ಮ ಪುತ್ರ ರಾಘವೇಂದ್ರನ ಹೆಸರನ್ನು ವರಿಷ್ಠರು ಸೇರಿಸಿದ್ದಾರೆ. ಇದು ಶಿವಮೊಗ್ಗ ಜಿಲ್ಲೆಯ ಕಾರ್ಯಕರ್ತರ ಒತ್ತಾಯವೂ ಹೌದು. ಈ ಹಿನ್ನೆಲೆಯಲ್ಲಿ ರಾಘವೇಂದ್ರನ ಹೆಸರು ಪಟ್ಟಿಯಲ್ಲಿ ಸೇರ್ಪಡೆಯಾಗಿದೆ ಹೊರತು. ಇದರಲ್ಲಿ ನನ್ನ ಒತ್ತಡ ಏನೂ ಇಲ್ಲ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.
ಇಂದು ಸಂಜೆ ವೇಳೆಗೆ ರಾಜ್ಯ 28 ಲೋಕಸಭೆ ಕ್ಷೇತ್ರಗಳಿಗೆ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ವರಿಷ್ಠರು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಗೆಲ್ಲುವ ಕುದುರೆ ಎನಿಸಿರುವ ರಾಘವೇಂದ್ರ ಅವರ ಸ್ಪರ್ಧೆ ಬಹುತೇಕ ಖಚಿತ ಎನ್ನಲಾಗಿದೆ. ರಾಘು ಸ್ಪರ್ಧಿಸಿದಲ್ಲಿ ಶಿವಮೊಗ್ಗ ಮತ್ತೆ ರಾಷ್ಟ್ರೀಯ ಸುದ್ದಿಯಾಗುವುದರಲ್ಲಿ ಸಂಶಯವಿಲ್ಲ. ಶಿವಮೊಗ್ಗ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಸ್ ಬಂಗಾರಪ್ಪ ಅಖಾಡಕ್ಕಿಳಿಯಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications