ಗಾಡಫಾದರ್ ಡಿಕೆಶಿ ವಿರುದ್ಧವೇ ತಿರುಗಿ ಬಿದ್ದ ತೇಜಸ್ವಿನಿ

2008ರಲ್ಲಿ ಕಾಂಗ್ರೆಸ್ ಪಕ್ಷ ಅಧಃಪತನ ಕಾಣಲು ಶಿವಕುಮಾರ್ ಕಾರಣರಾಗಿದ್ದಾರೆ. ಅವರ ವಿರುದ್ಧ ಕ್ರಮಕೈಗೊಳ್ಳವಂತೆ ಪಕ್ಷದ ಹೈಕಮಾಂಡ್ ಒತ್ತಾಯ ಪೂರ್ವಕ ಮನವಿ ಸಲ್ಲಿಸಲಾಗುವುದು. ಶಿವಕುಮಾರ್ ಅವರ ಕಿರುಕುಳ ಹಾಗೂ ಸರ್ವಾಧಿಕಾರಿ ಧೋರಣೆಯಿಂದ ಪಕ್ಷ ಸಂಪೂರ್ಣ ನೆಲಕಚ್ಚಿದೆ. ಇವರ ಕಾಟ ತಾಳಲಾರದೇ ಚೆನ್ನಪಟ್ಟಣ ಶಾಸಕ ಯೋಗೇಶ್ವರ ಹಾಗೂ ನಾರಾಯಣಗೌಡ ಅವರಂತಹ ಮುಖಂಡರು ಪಕ್ಷ ತ್ಯಜಿಸಲು ಕಾರಣವಾಗಿದೆ ಎಂದು ತೇಜಸ್ವಿನಿ ಆಕ್ರೋಶ ವ್ಯಕ್ತಪಡಿಸಿದರು.
ನಾನು ಬಿಜೆಪಿ ಸೇರುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ನನ್ನದು ಕಾಂಗ್ರೆಸ್ ಪಕ್ಷ, ಕೊನೆಯವರೆಗೂ ಇಲ್ಲಿ ಇರುವೆ ಎಂದ ಅವರು, ಕುಮಾರಕೃಪಾ ಗೆಸ್ಟ್ ಹೌಸ್ ನಲ್ಲಿ ಬಿಜೆಪಿ ಮುಖಂಡ ಎಲ್ ಕೆ ಅಡ್ವಾಣಿ ಅವರನ್ನು ಭೇಟಿ ಮಾಡಿರುವೆ ಎಂದು ಡಿಕೆಶಿ ಆರೋಪ ಮಾಡಿರುವುದು ತಪ್ಪು. ಒಬ್ಬ ಸಂಸದೆಯ ವಿರುದ್ದ ಪಕ್ಷದ ಕಾರ್ಯಾಧ್ಯಕ್ಷ ಇಂತಹ ಆರೋಪ ಮಾಡುವುದು ಪಕ್ಷ ವಿರೋಧಿ ಚಟುವಟಿಕೆ ಎನ್ನಲಾಗುತ್ತಿದೆ. ಆದ್ದಿರಿಂದ ಡಿಕೆಶಿ ಅವರ ಹಿಟ್ಲರ್ ನೀತಿಯನ್ನು ಸೋನಿಯಾ ಗಾಂಧಿ ಅವರ ಬಳಿ ವಿವರಿಸುವೆ ಎಂದು ತೇಜಸ್ವಿನಿ ಹೇಳಿದರು.
ಡಿಕೆಶಿ ತಮ್ಮ ಸಹೋದರನಿಗೆ ಲೋಕಸಭೆ ಟಿಕೆಟ್ ಕೊಡಿಸುವ ಸಲುವಾಗಿ ನನಗೆ ಟಿಕೆಟ್ ತಪ್ಪಿಸಲು ಭಾರಿ ಪ್ರಯತ್ನ ನಡೆದಿದೆ. ಮಾಜಿ ಶಾಸಕ ಸಿ ಎಂ ಲಿಂಗಪ್ಪ ಅವರು ತೇಜಸ್ವಿನಿ ಸ್ಪರ್ಧಿಸಿದರೆ, ಅವರನ್ನು ನಾವೇ ಸೋಲಿಸುತ್ತೇವೆ ಎಂದು ಬಹಿರಂಗವಾಗಿ ಹೇಳುತ್ತಾರೆ. ಇದು ಶುದ್ಧ ಪಕ್ಷ ವಿರೋಧಿ ಚಟುವಟಿಕೆ. ಇದಕ್ಕೆ ಡಿಕೆಶಿ ಅವರ ಸಂಪೂರ್ಣ ಬೆಂಬಲವಿದೆ ಎಂದು ಕಿಡಿಕಾರಿದರು.
ಶಾಸಕ ಯೋಗೇಶ್ವರ ಪಕ್ಷ ಬಿಡಲು ನೇರ ಕಾರಣ ಶಿವಕುಮಾರ್, ಅವರು ನೀಡುತ್ತಿರುವ ಚಿತ್ರಹಿಂಸೆ ತಾಳಲಾರದೇ ಮೂರು ಬಾರಿ ಕಾಂಗ್ರೆಸ್ ಶಾಸಕರಾಗಿದ್ದ ಅವರು ಬಿಜೆಪಿ ಕಡೆಗೆ ಮುಖ ಮಾಡಿರುವುದು ಪಕ್ಷಕ್ಕೆ ಭಾರಿ ಹಿನ್ನೆಡೆ. ಕೆಪಿಸಿಸಿ ಸ್ಥಾನದಲ್ಲಿ ಅವರನ್ನು ಮುಂದುವರೆಸಿದರೆ ಪಕ್ಷಕ್ಕೆ ಹಾನಿಯೇ ಹೊರತು ಲಾಭವಿಲ್ಲ. ಶಿವಕುಮಾರ್ ಪಕ್ಷ ಗೆಲ್ಲಲು ಸಹಕರಿಸಲಿ, ಸೋಲುವುದಕ್ಕೆ ನೀಡುವ ಸಹಕಾರವನ್ನು ಅವರು ನಿಲ್ಲಿಸಬೇಕು ಎಂದು ತೇಜಸ್ವಿನಿ ವ್ಯಂಗ್ಯವಾಡಿದರು.
(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ, ಮಲ್ಲಿಕಾರ್ಜುನಯ್ಯ ಬೇಸರ
ಲೋಕಸಭೆ ಚುನಾವಣೆಗೆ ಸಕಲ ಸಿದ್ಧತೆ: ಆಯುಕ್ತ












Click it and Unblock the Notifications