ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಪುಟದಿಂದ ರೆಡ್ಡಿ ಕೈಬಿಡಲು ದೇಶಪಾಂಡೆ ಆಗ್ರಹ

By Staff
|
Google Oneindia Kannada News

ಬೆಂಗಳೂರು, ಜ. 21 : ಬೆಳಗಾವಿಯಲ್ಲಿ ನಡೆಯುತ್ತಿರುವ ವಿಶೇಷ ಅಧಿವೇಶನದ ವೇಳೆ ಪ್ರತಿಪಕ್ಷದ ಮುಖಂಡರಿಗೆ ಜೀವ ಬೆದರಿಕೆ ಹಾಕಿರುವ ಪ್ರವಾಸೋಧ್ಯಮ ಸಚಿವ ಜನಾರ್ದನರೆಡ್ಡಿ ಅವರನ್ನು ಈ ತಕ್ಷಣವೇ ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಆರ್ ವಿ ದೇಶಪಾಂಡೆ ಸರ್ಕಾರವನ್ನು ಒತ್ತಾಯಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದನದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟದ ಸಚಿವರಿಗೆ ಕಲಿಸಲಿ ಎಂದು ಕಿವಿ ಮಾತು ಹೇಳಿದರು. ಬಳ್ಳಾರಿ ಬನ್ನಿ ನೋಡಿಕೊಳ್ಳುತ್ತೇವೆ ಹೀಗೆ ಜೀವ ಬೆದರಿಕೆ ಹಾಕಿರುವ ಜನಾರ್ದನರೆಡ್ಡಿ ಅವರ ನಡತೆ ಸದನಕ್ಕೆ ತಕ್ಕದಾಗಿಲ್ಲ. ಗಣಿ ಧಣಿಗಳ ಧೋರಣೆ ಇದೇ ರೀತಿ ಮುಂದುವರೆದರೆ ಅವರ ವಿರುದ್ಧ ಪ್ರತಿಭಟನಾ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿಯಯೂ ದೇಶಪಾಂಡೆ ಎಚ್ಚರಿಕೆ ನೀಡಿದರು.

ಸಂಪುಟದ ಸದಸ್ಯರ ಮೇಲೆ ಮುಖ್ಯಮಂತ್ರಿ ಹಿಡಿತ ಇಟ್ಟುಕೊಳ್ಳಬೇಕು. ರೆಡ್ಡಿ ಧಮಕಿಯಿಂದಾಗಿ ಬಳ್ಳಾರಿಯ ಕಾಂಗ್ರೆಸ್ ಕಾರ್ಯಕರ್ತರಿಗೆ ರಕ್ಷಣೆ ಇಲ್ಲದಂತಾಗಿದೆ. ಈ ಕ್ಷಣವೇ ಬಳ್ಳಾರಿಯಲ್ಲಿನ ಕಾರ್ಯಕರ್ತರಿಗೆ ರಕ್ಷಣೆ ಒದಗಿಸಬೇಕು ಎಂದು ಅವರು ಆಗ್ರಹಿಸಿದರು. ಬಳ್ಳಾರಿ ಗಣಿ ಧಣಿಗಳಿಗೆ ಅಧಿಕಾರದ ಮದ ತಲೆಗೆ ಹೊಕ್ಕಿದೆ. ಹೀಗಾಗಿ ಸದನದಲ್ಲಿ ಹೇಗೆ ನಡೆದುಕೊಳ್ಳಬೇಕು ಎನ್ನುವ ಕನಿಷ್ಠ ಪರಿಜ್ಞಾನವೂ ಇಲ್ಲ. ಸರ್ಕಾರ ಅವರ ಅಪ್ಪನ ಆಸ್ತಿ ಎಂದು ವರ್ತಿಸುತ್ತಿದ್ದಾರೆ.

ಇಂತಹ ಉದ್ಧಟತನ ಪ್ರದರ್ಶಿಸುವ ಅವರಿಗೆ ಮುಂದಿನ ದಿನಗಳಲ್ಲಿ ಬಳ್ಳಾರಿ ಜನ ಪಾಠ ಕಲಿಸಲಿದ್ದಾರೆ ಎಂದು ದೇಶಪಾಂಡೆ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಬಗ್ಗೆಯೂ ರೆಡ್ಡಿ ಲಘುವಾಗಿ ಮಾತನಾಡಿದ್ದಾರೆ. ಇದನ್ನು ಕಾಂಗ್ರೆಸ್ ಕಾರ್ಯಕರ್ತರು ಎಂದಿಗೂ ಸಹಿಸುವುದಿಲ್ಲ ಎಂದು ಕಿಡಿಕಾರಿದರು.

(ದಟ್ಸ್ ಕನ್ನಡ ವಾರ್ತೆ)
ಗಣಿ ಗದ್ದಲ ಸದನದಲ್ಲಿ ಕೋಲಾಹಲ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X