ಅಫ್ಜಲ್ ಗುರುಗೆ ಗಲ್ಲಿಗೆ ಅವಸರವೇಕೆ?: ಶಿವರಾಜ್
ಮುಂಬೈ, ಜ .4 : ಸಂಸತ್ ಭವನದ ಮೇಲೆ ದಾಳಿ ಪ್ರಕರಣದ ಪ್ರಮುಖ ರೂವಾರಿ ಅಫ್ಜಲ್ ಗುರನನ್ನು ಗಲ್ಲಿಗೇರಿಸಲು ಅಷ್ಟೊಂದು ಅವಸರ ಏಕೆ ಎಂದು ಕೇಂದ್ರದ ಮಾಜಿ ಗೃಹ ಸಚಿವ ಶಿವರಾಜ್ ಪಾಟೀಲ್ ಪ್ರಶ್ನಿಸಿದ್ದಾರೆ. ಮಾಜಿ ಪ್ರಧಾನಮಂತ್ರಿ ರಾಜೀವ ಗಾಂಧಿ ಹತ್ಯೆ ಮಾಡಿದವರ ಪ್ರಕರಣವೇ ಬಾಕಿ ಇದೆ. 30 ರಿಂದ 35 ಮಂದಿಯ ಕ್ಷಮದಾನದ ಅರ್ಜಿ ಇನ್ನೂ ಇತ್ಯರ್ಥವಾಗಿಲ್ಲ. ಅವರೆನ್ನಲ್ಲಾ ಬಿಟ್ಟು ಅಫ್ಜಲ್ ಗುರುವನ್ನೇ ಗಲ್ಲಿಗೇರಿಸಿ ಎಂದು ಏಕೆ ಹೇಳುತ್ತೀರಿ ಎಂದು ಶಿವರಾಜ್ ಪಾಟೀಲ್ ಮರು ಪ್ರಶ್ನ ಹಾಕಿದ್ದಾರೆ.
ಅಫ್ಜಲ್ ಗುರುವನ್ನು ನಾವೇನು ಪಾಕಿಸ್ತಾನಕ್ಕೆ ಕಳುಹಿಸಿಲ್ಲ. ಆತ ಭಾರತದ ಜೈಲಿನಲ್ಲೇ ಇದ್ದಾನೆ. ಅಫ್ಜಲ್ ಗೆ ಗಲ್ಲು ಶಿಕ್ಷೆ ವಿಧಿಸಿ ಎನ್ನುವುದರ ಹಿಂದೆ ರಾಜಕೀಯವಿದೆ ಎಂದು ಬಿಜೆಪಿ ಪಕ್ಷದ ನಾಯಕರ ಮೇಲೆ ಪಾಟೀಲ್ ಹರಿಹಾಯ್ದರು. ಬಿಜೆಪಿ ಸರ್ಕಾರವಿದ್ದಾಗ ಜೈಷೆ ಮೊಹ್ಮದ್ ಮುಖಂಡ ಮೌಲಾನ ಮಸೂದ್ ಅಜರ್ ನನ್ನು ರಾಜ ಮರ್ಯಾದೆಯಿಂದ ಕಂದಹಾರ್ ವಿಮಾನ ನಿಲ್ದಾಣದಲ್ಲಿ ಬಿಟ್ಟು ಬಂದಾಗ ಇವರಲ್ಲಿ ಭಾರತೀಯರ ಹಿತ ಕಾಣಲಿಲ್ಲವೇ ಎಂದು ಅವರು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು.
1999 ರಲ್ಲಿ ಉಗ್ರರ ಭಾರತದ ವಿಮಾನವನ್ನು ಅಪಹರಿಸಿ ಭಯೋತ್ಪಾದಕರನ್ನು ಬಿಡುಗಡೆ ಮಾಡುವಂತೆ ಬೇಡಿಕೆ ಇಟ್ಟಿದ್ದರು. ಆಗ ಬಿಜೆಪಿ ನೇತೃತ್ವದ ಭಾರತದ ಸರ್ಕಾರ ಮೌಲಾನ ಮಾಸೂದ್ ಸೇರಿ ನಾಲ್ಕು ಜನ ಉಗ್ರರನ್ನು ಬಿಡುಗಡೆ ಮಾಡಿತ್ತು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications