'ಉಪಚುನಾವಣೆಗೆ ಬಿಜೆಪಿ ನೂರು ಕೋಟಿ ಖರ್ಚು '
ಬೆಂಗಳೂರು, ಡಿ. 31 : ಉಪಚುನಾವಣೆಯಲ್ಲಿ ಐದು ಸ್ಥಾನಗಳನ್ನು ಗೆಲ್ಲುವ ಮೂಲಕ ಸರ್ಕಾರ ಸುಭದ್ರವಾಯಿತು ಎಂದು ಬಿಜೆಪಿ ನಿಟ್ಟುಸಿರು ಬಿಡುವ ಮುನ್ನವೇ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರು ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಉಪಚುನಾವಣೆಯಲ್ಲಿ ಆಡಳಿತರೂಢ ಬಿಜೆಪಿ ಸರ್ಕಾರ ಸುಮಾರು 100 ಕೋಟಿ ರುಪಾಯಿಗಳನ್ನು ಖರ್ಚು ಮಾಡಿದೆ ಎಂದು ಆರೋಪಿಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಗೆ ದೊರೆಕಿರುವ ಪ್ರಥಮ ವರದಿಗಳ ಪ್ರಕಾರ ಬಿಜೆಪಿ ಪ್ರತಿ ಕ್ಷೇತ್ರದಲ್ಲಿಯೂ 15 ರಿಂದ 20 ಕೋಟಿ ರುಪಾಯಿಗಳನ್ನು ವ್ಯಯಿಸಿದೆ ಎಂದರು. ಅಭಿವೃದ್ಧಿ ಹೆಸರಿನಲ್ಲಿ ಸರ್ಕಾರದ ಖಜಾನೆಯಿಂದ ಕೋಟ್ಯಂತರ ರುಪಾಯಿಗಳನ್ನು ಬಿಡುಗಡೆ ಮಾಡಿರುವ ಯಡಿಯೂರಪ್ಪ ಅಭಿವೃದ್ಧಿ ಮಾಡದೇ ಚುನಾವಣಾ ವೆಚ್ಚ ಈ ಎಲ್ಲ ಹಣವನ್ನು ಖರ್ಚು ಮಾಡಿದ್ದಾರೆ ಎಂದು ಕಿಡಿಕಾರಿದರು.
ಕುಮಾರಸ್ವಾಮಿ ಗೆ ಸಮನ್ಸ್ ಜಾರಿ
ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಚಾರಣೆ ನಡೆಸಿದ 34 ನೇ ಸತ್ರ ನ್ಯಾಯಾಲಯ ಕುಮಾರಸ್ವಾಮಿ ಅವರಿಗೆ ಸಮನ್ಸ್ ಜಾರಿಗೊಳಿಸಿದೆ. ಫೆ. 25 ರಂದು ಖುದ್ದು ನ್ಯಾಯಾಲಯಕ್ಕೆ ಹಾಜರಾಗುವಂತೆ ನ್ಯಾಯಾಲಯ ಸೂಚನೆ ನೀಡಿದೆ. ಈಜೀಪುರ ವಸತಿ ಸಮುಚ್ಛಯ ಕಾಮಗಾರಿಯಲ್ಲಿ ಮೇವರಿಕ್ ಸಂಸ್ಥೆಯಿಂದ ಸಿಎಂ ಯಡಿಯೂರಪ್ಪ 50 ಕೋಟಿ ರುಪಾಯಿ ಲಂಚ ಸ್ವೀಕರಿಸಿದ್ದಾರೆ ಎಂದು ಎಚ್ ಡಿ ಕುಮಾರಸ್ವಾಮಿ ಆರೋಪಿ ಮಾಡಿದ್ದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಇತ್ತೀಚೆಗೆ ಅವರ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದರು.
ಈಜೀಪುರ ವಸತಿ ಸಂಕೀರ್ಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ 50 ಕೋಟಿ ರುಪಾಯಿಗಳ ಆರೋಪಿ ಮಾಡಿದ್ದಕ್ಕೆ ಸರ್ಕಾರ ತಮ್ಮ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದೆ. ಅದಕ್ಕೆ ನಾನು ಎಂದಿಗೂ ಹೆದರುವುದಿಲ್ಲ. ಅದಕ್ಕೆ ಬೇಕಿರುವ ಸಾಕ್ಷಿ ಪುರಾವೆಗಳು ನಮ್ಮ ಬಳಿ ಇವೆ ಎಂದು ಕುಮಾರಸ್ವಾಮಿ ಪ್ರತಿಪಾದಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications