ಧರ್ಮಸಿಂಗ್ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿ
ಬೆಂಗಳೂರು, ಡಿ. 23 : ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ರಾಜ್ಯ ರಾಜಕೀಯದಲ್ಲಿ ಮತ್ತೊಂದು ಬಿರುಗಾಳಿ ಬೀಸುವ ಸಾಧ್ಯತೆಗಳು ದಟ್ಟವಾಗಿವೆ. ಗಣಿಗಾರಿಕೆ ಅಕ್ರಮಗಳು ಕುರಿತು ತನಿಖೆ ನಡೆಸಿದ ಲೋಕಾಯುಕ್ತರು, ಈ ಹಗರಣದಲ್ಲಿ ಭಾಗಿಯಾಗಿರುವ ಮಾಜಿ ಮುಖ್ಯಮಂತ್ರಿ ಎನ್ ಧರ್ಮಸಿಂಗ್ ಮತ್ತು ಇತರ 12 ಮಂದಿ ಹಿರಿಯ ಅಧಿಕಾರಿಗಳಿಂದ 745,56 ಕೋಟಿ ರುಪಾಯಿ ವಸೂಲಿ ಮಾಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ.
ಸರ್ಕಾರಕ್ಕೆ ಇತ್ತೀಚೆಗೆ ಸಲ್ಲಿಸಿದ ವರದಿಯಲ್ಲಿ ಈ ಶಿಫಾರಸ್ಸು ಮಾಡಿದ್ದು, ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿರುವ ಅಧಿಕಾರಿಗಳು ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಭ್ರಷ್ಟಾಚಾರ ನಿರ್ಮೂಲನೆ ಕಾಯ್ದೆ ಪ್ರಕಾರ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ಲೋಕಾಯುಕ್ತರು ಸಲಹೆ ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ಎನ್ ಧರ್ಮಸಿಂಗ್ ನಿಯಮಬಾಹಿರವಾಗಿ ಗಣಿ ಪರವಾನಗಿ ಕೊಟ್ಟಿರುವುದರಿಂದ ಸುಮಾರು 23.22 ಕೋಟಿ ರುಪಾಯಿ ಸರ್ಕಾರ ಬೊಕ್ಕಸಕ್ಕೆ ನಷ್ಟವಾಗಿದೆ, ಆದ್ದರಿಂದ ಈ ಮೊತ್ತವನ್ನು ಅವರಿಂದಲೂ ವಸೂಲಿ ಮಾಡುವಂತೆ ಸಲಹೆ ನೀಡಿದ್ದಾರೆ.
ಅಕ್ರಮ ಗಣಿಗಾರಿಕೆಯಲ್ಲಿ ಐಎಎಸ್ ಅಧಿಕಾರಿಗಳೂ ಸೇರಿದಂತೆ 11 ಹಿರಿಯ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬ ಅಂಶವನ್ನು ಲೋಕಾಯುಕ್ತರು ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ನಮೂದಿಸಿರುವ ಅಂಶ ಬೆಳಕಿಗೆ ಬಂದಿದೆ.
* ಗಂಗಾರಾಮ್ ಬಡೇರಿಯಾ
* ಬಸಪ್ಪ ರೆಡ್ಡಿ
* ಮಹೇಂದ್ರ ಜೈನ್
* ಡಿ ಎಸ್ ಅಶ್ವತ್ಥ್
* ಕೆ ಎಸ್ ಮಂಜುನಾಥ
* ಐ ಐರ್ ಪೆರುಮಾಳ್
* ವಿ ಉಮೇಶ್
* ಕೆ ಶ್ರೀನಿವಾಸ್ (ಡಿಜಿಎಂ,ಎಂಎಂಎಲ್)
* ಎಂ ರಾಮಪ್ಪ (ಡಿಜಿಎಂ, ಎಂಎಂಎಲ್)
* ಶಂಕರಲಿಂಗಯ್ಯ (ಡಿಜಿಎಂ, ಎಂಎಲ್ಎಲ್)
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications