ನಿಮ್ಮ ಮದುವೆ ನೊಂದಾವಣೆ ಆಗಿದೆಯಾ?
ಶಿಮ್ಲಾ, ಡಿ. 23 : ಮದುವೆಗೆ ಮುನ್ನ ವಧೂವರರು ಏಡ್ಸ್ ಪರೀಕ್ಷೆಗೆ ಕಡ್ಡಾಯವಾಗಿ ಒಳಪಡಬೇಕಾದ ಕಾನೂನನ್ನು ಜಾರಿಗೆ ತರಲು ಹಿಮಾಚಲ ಪ್ರದೇಶ ಸರಕಾರ ಚಿಂತಿಸುತ್ತಿದೆ. ಈ ಮೂಲಕವಾದರೂ ಸೋಂಕು ತಗಲುವುದು ಮತ್ತು ಹರಡುವುದು ಕಡಿಮೆ ಆಗುವುದೆಂಬ ನಿರೀಕ್ಷೆ ಅಲ್ಲಿನ ಸರಕಾರದ್ದು.
ರಾಜ್ಯದಲ್ಲಿ ಏಡ್ಸ್ ಸೋಂಕು ಅಂಟಿದವರ ಸಂಖ್ಯೆ ಒಟ್ಟು 2,511. ಇವರ ಪೈಕಿ 477 ರೋಗಿಗಳು ತೀವ್ರತಮ ಕಾಯಿಲೆಗೆ ತುತ್ತಾಗಿದ್ದಾರೆ. ಸೋಮವಾರ ಎನ್ ಡಿ ಒ ಸಂಸ್ಥೆಯ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ ಮುಖ್ಯಮಂತ್ರಿ ಪ್ರೇಮ್ ಕುಮಾರ್ ಧಮಾಲ್ ಈ ವಿಷಯ ಪ್ರಕಟಿಸಿದ್ದಾರೆ.
ಚಿಕಿತ್ಸೆ, ಔಷಧೋಪಚಾರ, ಮಾನವೀಯ ಕಳಕಳಿಗಳ ಜತೆಗೆ ರೋಗ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯ ಎಂದು ಅವರು ಪ್ರತಿಪಾದಿಸಿದ್ದಾರೆ. ಕೆಲವು ವಿಚಾರಗಳಲ್ಲಿ ಕಾನೂನು ಕಟ್ಟಳೆಗಳ ನೆರವಿಲ್ಲದೆ ಅರಿವು ಮೂಡಿಸುವುದು ಸಾಧ್ಯವಿಲ್ಲ ಎನ್ನುವುದು ಅವರ ಅಭಿಮತ.
ನಮ್ಮ ರಾಜ್ಯದಲ್ಲೂ ಇಂಥ ಕಾನೂನು ಜಾರಿಗೆ ಬಂದರೆ ಕ್ಷೇಮ. ರಾಜ್ಯದಲ್ಲಿ ನಾನಾ ಜಿಲ್ಲೆಗಳಲ್ಲಿ ರೋಗಕ್ಕೆ ತುತ್ತಾದವರ, ಆಗುತ್ತಿರುವವರ ಸಂಖ್ಯೆ ಗಾಬರಿ ಹುಟ್ಟಿಸುತ್ತಿದೆ. ಹುಬ್ಬಳ್ಳಿ, ಮೈಸೂರು, ಕೊಪ್ಪಳ, ಗದಗ, ಬಳ್ಳಾರಿ, ಬಿಜಾಪುರ ಮತ್ತು ಮೈಸೂರಿನಲ್ಲಿ ಏಡ್ಸ್ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ.
ಏಡ್ಸ್ ದಿನಾಚರಣೆ ಆಚರಿಸಿ ಭಾಷಣ ಹೊಡೆಯುವುದು ಮತ್ತು ಅದನ್ನು ನಾವು ಅಂತರ್ ಜಾಲದಲ್ಲಿ ಪ್ರಕಟಿಸುವುದರಿಂದ ಹೆಚ್ಚಿನದೇನನ್ನೂ ಸಾಧಿಸಿದಂತಾಗುವುದಿಲ್ಲ. ಮದುವೆಗೆ ಮುನ್ನ ರೋಗಪತ್ತೆ ಪರೀಕ್ಷೆ ಆಗಬೇಕು. ಸ್ವಯಂಪ್ರೇರಣೆಯಿಂದ ಇಂಥ ಪರೀಕ್ಷೆಗಳನ್ನು ನಮ್ಮ ನಾಗರಿಕರು ಮಾಡಿಕೊಳ್ಳರು. ಏಡ್ಸ್ ಹಾಗಿರಲಿ, ಪ್ರತಿಯೊಂದು ಮದುವೆಯೂ ನೊಂದಾವಣೆ ಆಗಬೇಕು ಎಂಬ ಕಾನೂನು ನಮ್ಮಲ್ಲಿ ಇದ್ದೇ ಇದೆ.
ಆದರೆ,ಎಷ್ಟು ಮಂದಿ ನೊಂದಾವಣೆ ಮಾಡಿಸಿಕೊಂಡಿದ್ದಾರೆ? ನೀವು ಮದುವೆ ಆಗಿದ್ದೀರಾ ? ನಿಮ್ಮ ಮದುವೆ ನೊಂದಾವಣೆ ಆಗಿದೆಯಾ? ವಿದ್ಯಾವಂತರು, ಚಿಂತಕರು, ಸಮಾಜ ಸುಧಾರಕರು, ಸಾಹಿತಿಗಳು, ಬರಹಗಾರರು, ಪತ್ರಕರ್ತರಂಥ ವಿದ್ಯಾವಂತರು ಮದುವೆ ನೊಂದಣಿ ಮಾಡಿಸಿಕೊಳ್ಳುತ್ತಾರೆ ಎಂದು ಹೇಳಲಾಗಿದೆ !
(ದಟ್ಸ್ ಕನ್ನಡ ವಾರ್ತೆ)
ಮೈಸೂರಿನಲ್ಲಿ ಏಡ್ಸ್ ಪೀಡಿತರ ಅಂಕಿಅಂಶ
ವಿಶ್ವ ಏಡ್ಸ್ ದಿನ: ಜನರೇ ಜಾಗೃತರಾಗಿ












Click it and Unblock the Notifications