ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರಿನಲ್ಲಿ ಏಡ್ಸ್ ಪೀಡಿತರ ಅಂಕಿಅಂಶ

By Staff
|
Google Oneindia Kannada News

AIDS in Mysuru : Statistics 2008
ಮೈಸೂರು, ಡಿ. 20 : ಏಡ್ಸ್ ಬಗ್ಗೆ ಅರಿವು ಮೂಡಿಸುವ ಜಾಥಾ, ಕಂಸಾಳೆ ತಂಡದಿಂದ ಏಡ್ಸ್ ಜಾಗೃತಿ ಕಾರ್ಯಕ್ರಮ, ಮಾಹಿತಿಕಾರರಿಂದ ಉಪನ್ಯಾಸ, ಮೂಕಾಭಿನಯದ ಮೂಲಕವೂ ಏಡ್ಸ್ ಮಾಹಿತಿ, ಏಡ್ಸ್ ಜಾಗೃತಿ ಕ್ಷೇತ್ರದಲ್ಲಿ ದುಡಿದವರಿಗೆ ಸನ್ಮಾನ, ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಸಭಾ ಕಾರ್ಯಕ್ರಮಗಳ ಮೂಲಕ ಮೈಸೂರಿನಲ್ಲಿ ಶುಕ್ರವಾರ ವಿಶ್ವ ಏಡ್ಸ್ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಮೈಸೂರು ನಗರದ ವಿವಿಧ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಹಾಗೂ ಇನ್ನಿತರ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದ ಜಾಥಾಕ್ಕೆ ಮೈಸೂರು ವೈದ್ಯಕೀಯ ಮಹಾವಿದ್ಯಾಲಯದ ಬಳಿ ಕೆ.ಆರ್. ಆಸ್ಪತ್ರೆ ವೈದ್ಯಕೀಯ ಅಧೀಕ್ಷಕಿ ಡಾ. ಗೀತಾ ಅವಧಾನಿ ಚಾಲನೆ ನೀಡಿದರು.

ನಂತರ ಕಲಾಮಂದಿರದಲ್ಲಿ ನಡೆದ ಸಭಾ ಕಾರ್ಯಕ್ರಮ ಉದ್ಘಾಟಿಸಿದ ಮೈಸೂರು ಜಿಲ್ಲಾ ಪಂಚಾಯತ್ ಅಧ್ಯಕ್ಷ ಕೆ. ಮರಿಗೌಡ, ಯುವಶಕ್ತಿ ದೇಶದ ಸಂಪತ್ತು. ಇದು ಏಡ್ಸ್ ನಂತಹ ರೋಗಗಳಿಂದ ನಿಷ್ಕ್ರಿಯ ಆಗಬಾರದು. ಈ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಜನಪ್ರತಿನಿಧಿಗಳು, ಮಹಿಳಾ ಸಂಘಟನೆಗಳು ಸಕ್ರಿಯವಾಗಿ ಭಾಗವಹಿಸಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ವಿ. ರಾಜು ಭಾರತದಲ್ಲಿ 24.5 ಲಕ್ಷ ಎಚ್ಐವಿ ಸೋಂಕಿತರು ಇದ್ದು , ರಾಜ್ಯದಲ್ಲಿ ಈ ಸಂಖ್ಯೆ 2.5 ಲಕ್ಷ ಇದೆ. ಮೈಸೂರು ಜಿಲ್ಲೆಯಲ್ಲಿ 2318 ಎಚ್ಐವಿ ಸೋಂಕಿತರು ಇದ್ದು , 162 ಜನರಿಗೆ ಏಡ್ಸ್ ಇದೆ. ಈ ಪೈಕಿ 18 ಮಂದಿ ಏಡ್ಸ್‌ನಿಂದ ಮೃತಪಟ್ಟಿದ್ದಾರೆ ಎಂದರು. ಏಡ್ಸ್‌ನಿಂದಾಗಿ ವಿಶ್ವದಲ್ಲಿ 15 ಮಿಲಿಯನ್ ಮಕ್ಕಳು ಅನಾಥರಾಗಿದ್ದಾರೆ. ಏಡ್ಸ್ ತಡೆಯುವಲ್ಲಿ ಸಮುದಾಯ ಹಾಗೂ ಆಡಳಿತ ಪಾತ್ರದ ಬಗ್ಗೆ ಈ ಸಂದರ್ಭದಲ್ಲಿ ಚಿಂತಿಸಿ ಜಾಗೃತಿ ಕಾರ್ಯಕ್ರಮವನ್ನು ರೂಪಿಸಬೇಕಾಗಿದೆ ಎಂದು ಡಾ. ರಾಜು ಹೇಳಿದರು.

ಏಡ್ಸ್ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ಸರಗೂರು ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಕಾರ್ಯದರ್ಶಿ ಡಾ. ಎಂ.ಎ. ಬಾಲಸುಬ್ರಮಣ್ಯಂ ಅವರು ಸರ್ಕಾರ ಹಾಗೂ ಸಮುದಾಯ ಕೈಗೊಂಡ ಕ್ರಮಗಳಿಂದ ಎಚ್ಐವಿ ಪ್ರಕರಣಗಳು ಇಳಿಮುಖವಾಗುತ್ತಿದೆ. ಹಿಂದಿನ ವರ್ಷ ಸೋಂಕಿನ ಪ್ರಮಾಣ ಶೇ.1.4ರಷ್ಟು ಇದ್ದದ್ದು ಈಗ ಶೇ.1ಕ್ಕೆ ಇಳಿದಿದೆ. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎ.ಆರ್.ಟಿ. ಕೇಂದ್ರಗಳನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಸೋಂಕಿಗೆ ತುತ್ತಾಗದಂತೆ ಎಚ್ಚರ ವಹಿಸಬೇಕು ಎಂದರು.

ಆನಂದ ಜ್ಯೋತಿ ಸಂಸ್ಥೆಯ ಸ್ವರಾಜ್, ಆಶಾಕಿರಣ ಸಂಸ್ಥೆಯ ಡಾ.ಮೋತಿ, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಕಾರ್ಯದರ್ಶಿ ಡಾ.ಎಂ.ಎ. ಬಾಲಸುಬ್ರಮಣ್ಯಂ, ಆಶೋದಯ ಸಂಸ್ಥೆಯ ರತ್ನಮ್ಮ ಹಾಗೂ ವಿಮೋಚನಾ ಸಂಸ್ಥೆಯ ನಾಗರತ್ನ ಅವರುಗಳನ್ನು ಏಡ್ಸ್ ಜಾಗೃತಿ ಕ್ಷೇತ್ರದಲ್ಲಿ ಮಾಡಿದ ಕೆಲಸಕ್ಕಾಗಿ ಸನ್ಮಾನಿಸಲಾಯಿತು.

ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಎಂ. ಸತ್ಯನಾರಾಯಣ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ತೋಂಟದಾರ್ಯ, ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಎಂ.ವಿ. ಗೌರಮ್ಮ ಸೋಮಶೇಖರ್, ನೆಹರೂ ಯುವ ಕೇಂದ್ರದ ಸಮನ್ವಯಾಧಿಕಾರಿ ಚಿಕ್ಕಲಿಂಗೇಗೌಡ, ಆಶೋದಯ ಸಂಸ್ಥೆ ಅಧ್ಯಕ್ಷೆ ರತ್ನಮ್ಮ , ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿ. ಶಂಕರ್, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಬಿ. ರಘುಕುಮಾರ್ ಮತ್ತಿತರರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X