ಹುತಾತ್ಮರಿಗೆ ರಾಜ್ಯ ಸಚಿವ ಸಂಪುಟ ಶ್ರದ್ಧಾಂಜಲಿ
ಬೆಂಗಳೂರು, ನ. 28 : ಗುರುವಾರ ನಡೆದ ಸಚಿವ ಸಂಪುಟ ಸಭೆಯು ಮುಂಬೈನಲ್ಲಿ ನಡೆದಿರುವ ಉಗ್ರರ ದಾಳಿಯ ಬಗ್ಗೆ ತೀವ್ರವಾಗಿ ಖಚಿತಪಡಿಸಿತಲ್ಲದೆ ಕಾರ್ಯಾಚರಣೆಯಲ್ಲಿ ಹತರಾದ ಭಯೋತ್ಪಾದಕ ನಿಗ್ರಹ ದಳದ ಮುಖ್ಯಸ್ಥ ಹೇಮಂತ್ ಕರ್ಕರೆ, ಜಂಟಿ ಪೊಲೀಸ್ ಕಮೇಷನರ್ ಅಶೋಕ್ ಕಾಮ್ಟೆ, ಎನ್ ಕೌಂಟರ್ ಸ್ಪೆಷಲಿಸ್ಟ್ ವಿಜಯ್ ಸಲಸ್ಕರ್, ಮತ್ತು ಪೊಲೀಸ್ ಸಿಬ್ಬಂದಿ ವರ್ಗಕ್ಕೆ ಶೋಕ ಸೂಚಕವಾಗಿ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮುಂಬೈಯಲ್ಲಿ ಉಗ್ರರ ನಡೆಸಿದ ಹೀನ ಕೃತ್ಯವನ್ನು ತೀವ್ರ ಖಂಡಿಸಿದರು.
ಸಚಿವ ಸಂಪುಟದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವೆ ಶೋಭಾ ಕರಂದ್ಲಾಜೆ, ಮುಂಬೈಯಲ್ಲಿ ಭಯೋತ್ಪಾದಕರ ದಾಳಿಯ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ವಿಶೇಷ ಭದ್ರತೆಯನ್ನು ಒದಗಿಸಲಾಗಿದೆ ಎಂದರು.
ಕೇಂದ್ರ ಪೊಲೀಸ್ ಮೀಸಲು ಪಡೆಗೆ ಬೆಂಗಳೂರು ದಕ್ಷಿಣ ತಾಲ್ಲೂಕಿನ ತರಳು ಗ್ರಾಮದಲ್ಲಿ ೨೨೦ ಎಕರೆ ಜಮೀನನ್ನು ನೀಡಲು ತೀರ್ಮಾನಿಸಲಾಗಿದೆ ಎಂದರು. ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯ(ಸಿಇಟಿ) ಮೂಲಕ ವೃತ್ತಿಶಿಕ್ಷಣ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ 2008-09 ನೇ ಸಾಲಿನಲ್ಲಿ ಶೇ 6 ರ ಬಡ್ಡಿದರ ದಲ್ಲಿ ಶೈಕ್ಷಣಿಕ ಸಾಲವನ್ನು ಜೂನ್ 1ರಿಂದ ಅನ್ವಯಿಸುವಂತೆ ನೀಡಲಾಗುವುದು ಎಂದು ಹೇಳಿದರು.
ಬಿಪಿಎಲ್ ಕಾರ್ಡುಗಳ ನೀಡಿಕೆಯನ್ನು ಪ್ಲಾಂಟೇಶನ್ ಕಾರ್ಮಿಕರಿಗೂ ವಿಸ್ತರಿಸಲು ತೀರ್ಮಾನಿಸಿದ್ದು ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಯ ಕಾರ್ಮಿಕರಿಗೆ ನೆರವು ದೊರೆಯಲಿದೆ. ಸಹಕಾರಿ ಸಂಘಗಳ ಮೂಲಕ ಕೃಷಿಕರಿಗೆ, ನೇಕಾರರಿಗೆ, ಮೀನುಗಾರರಿಗೆ ಶೇ. 3ರ ಬಡ್ಡಿ ದರದಲ್ಲಿ ಸಹಕಾರಿ ಸಾಲ ನೀಡುವುದು. ಘನತ್ಯಾಜ್ಯ ವಸ್ತುಗಳ ನಿರ್ವಹಣೆಗಾಗಿ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಗೆ ಬೆಂಗಳೂರು ಉತ್ತರ ಮತ್ತು ದಕ್ಷ್ಷಿಣ ಭಾಗಗಳಲಿ ಒಟ್ಟು 400 ಎಕರೆ ಜಮೀನನ್ನು ನೀಡಲು ತೀರ್ಮಾನಿಸಿದೆ.
ರಾಜ್ಯದಲ್ಲಿನ ವಿದ್ಯುತ್ ಅಭಾವ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸಕ್ಕರೆ ಕಾರ್ಖಾನೆಗಳು ರಾಜ್ಯದಲ್ಲಿ ಒಟ್ಟು 300 ಮೆ.ವ್ಯಾ. ವಿದ್ಯುತ್ ಉತ್ಪಾದಿಸುತ್ತಿದ್ದು ಅದರಲ್ಲಿ ಈವರೆಗೆ 80 ಮೆ.ವ್ಯಾ. ಮಾತ್ರ ಸರ್ಕಾರಕ್ಕೆ ಮಾರಾಟ ಮಾಡಲಾಗುತ್ತಿತ್ತು. ಈಗ ಸರ್ಕಾರವು ಯೂನಿಟ್ ಗೆ ರೂ.7.25 ದರದಲ್ಲಿ ಇನ್ನೂ 220 ಮೆ.ವ್ಯಾ ಖರೀದಿಸಲು ಒಪ್ಪಂದ ಮಾಡಿಕೊಳ್ಳಲು ತೀರ್ಮಾನಿಸಿದೆ. ಕೇಂದ್ರದಿಂದ ಸರಾಸರಿ ತಿಂಗಳಿಗೆ 1599 ಮೆ.ವ್ಯಾ. ವಿದ್ಯುತ್ ಸರಬರಾಜಾಗಬೇಕಾಗಿದ್ದು ಅದು ಕೇವಲ 1200 ಮೆ.ವ್ಯಾ. ಮಾತ್ರ ಇದೆಯೆಂದು ಗಮನಿಸಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications