ಬೆಂಗಳೂರಲ್ಲಿ ಇಂಟರ್ನೆಟ್ ರೇಡಿಯೊ ಪ್ರಾರಂಭ
ಬೆಂಗಳೂರು, ಅ.22: ವಿಶ್ವದಾದ್ಯಂತ ಸಂಗೀತ ಪ್ರೇಮಿಗಳ ಸಂಗೀತ ದಾಹ ತಣಿಸುತ್ತಿರುವ ಇಂಟರ್ನೆಟ್ ರೇಡಿಯೋ(ಅಂತರ್ಜಾಲ ಆಕಾಶವಾಣಿ)ಭಾರತದಲ್ಲಿ ಇದೇ ಮೊದಲ ಬಾರಿಗೆ ನಮ್ಮ ಬೆಂಗಳೂರಿನಲ್ಲಿ ಇಂದು ಪ್ರಾರಂಭವಾಯಿತು. ಇಷ್ಟು ದಿನಗಳ ಕಾಲ ಎಫ್ ಎಂ ತರಂಗಾಂತರದಲ್ಲಿ ಹರಿದು ಬರುತ್ತಿದ್ದ ಸಂಗೀತಕ್ಕೆ ಮನಸೋಲುತ್ತಿದ್ದ ಶ್ರೋತೃಗಳು ಇನ್ನು ಮುಂದೆ ಇಂಟರ್ನೆಟ್ ಸಂಗೀತಕ್ಕೆ ಕಿವಿಗೊಡಬಹುದು.
ಬಹಳಷ್ಟು ಸಂಖ್ಯೆಯಲ್ಲಿ ನೆರೆದಿದ್ದ ಶ್ರೋತೃಗಳ ಸಮ್ಮುಖದಲ್ಲಿ ಇಂಟರ್ನೆಟ್ ರೇಡಿಯೊಗೆ ಇಂದು ಬೆಂಗಳೂರಿನಲ್ಲಿ ಚಾಲನೆ ನೀಡಲಾಯಿತು. ಭಾರತದಲ್ಲಿ ಇದುವರೆಗೂ ಆರಂಭವಾದ ಇಂಟರ್ನೆಟ್ ರೇಡಿಯೋ ಶೀಘ್ರದಲ್ಲೇ ಬಹಳಷ್ಟು ಶ್ರೋತೃಗಳನ್ನು ಸೆಳೆಯುತ್ತದೆ ಎಂಬ ವಿಶ್ವಾಸವನ್ನು myopusradio.com ವ್ಯಕ್ತಪಡಿಸಿತು.
ಇಂದು ಪ್ರಾರಂಭಿಸಲಾದ ಇಂಟರ್ನೆಟ್ ರೇಡಿಯೋ ಕೇಂದ್ರಕ್ಕೆ tribute to Opus ಎಂದು ಹೆಸರಿಸಲಾಗಿದೆ. ರೆಸ್ಟೋರೆಂಟ್ ಮತ್ತು ಬಾರ್ ಗಳಲ್ಲಿ ಕಳೆದ ಐದು ವರ್ಷಗಳಿಂದ ಸಂಗೀತ ಹಾಗೂ ಸಂಗೀತ ಚಟುವಟಿಕೆಗಳನ್ನು ನಿರ್ವಹಿಸುತ್ತಾ ಬಂದಿರುವ ಟ್ರಂಪ್ ಇಟ್ ಎಂಟರ್ ಟೈನ್ ಮೆಂಟ್ ಹಾಗೂ ಕ್ರಿಯೇಟೀವ್ ಸರ್ವಿಸಸ್ ನ ಒಂದು ಅಂಗ ಈ ಇಂಟರ್ನೆಟ್ ರೇಡಿಯೊ.
ಪ್ರಸ್ತುತ ಬೆಂಗಳೂರಿನಲ್ಲಿ ಮಾತ್ರ ಕೇಂದ್ರವನ್ನು ಹೊಂದಿರುವ ಮೈಓಪಸ್ ರೇಡಿಯೊ ಇತರ ನಗರಗಳಲ್ಲೂ ತನ್ನ ಜಾಲವನ್ನ್ನು ವಿಸ್ತರಿಸಿಕೊಳ್ಳಲಿದೆ. ಮೈಓಪಸ್ ರೇಡಿಯೊ.ಕಾಂ ಇಂಟರ್ನೆಟ್ ರೇಡಿಯೊದಲ್ಲಿ ಅಂತರಾಷ್ಟ್ರೀಯ ಸಂಗೀತವನ್ನು ಎಫ್ ಎಂ ರೇಡಿಯೊ ಗುಣಮಟ್ಟದಲ್ಲಿ ಆಲಿಸಬಹುದು ಎಂದು ಸಂಸ್ಥೆ ತಿಳಿಸಿದೆ.
ಇಂಟರ್ನೆಟ್ ರೇಡಿಯೊ ಕೇಳಬೇಕಾ?
ನೀವು ಮಾಡಬೇಕಿರುವುದು ಇಷ್ಟೆ. ಮೊದಲು ನಿಮ್ಮ ಕಂಪ್ಯೂಟರಿಗೆ ಬ್ರಾಂಡ್ ಬ್ಯಾಂಡ್ ಸಂಪರ್ಕ ಪಡೆಯಬೇಕು. ಆನಂತರ ಅಡೋಬ್ ಸಂಸ್ಥೆಯ ಅಡೋಬ್ ಫ್ಲಾಶ್ ಪ್ಲೇಯರ್ ಹೊಸ ಆವೃತ್ತಿಯನ್ನು ನಿಮ್ಮ ಕಂಪ್ಯೂಟರ್ ನಲ್ಲಿ ಪ್ರತಿಷ್ಠಾಪಿಸಿಕೊಳ್ಳಬೇಕು. ಅಡೋಬ್ ಅಂತರ್ಜಾಲ ತಾಣದಿಂದ ಈ ತಂತ್ರಾಂಶವನ್ನು ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದು. ಆಗಷ್ಟೆ ಇಂಟರ್ನೆಟ್ ರೇಡಿಯೊಗೆ ಟ್ಯೂನ್ ಮಾಡಿಕೊಂಡು ಸಂಗೀತಕ್ಕೆ ಕಿವಿಗೊಡಬಹುದು.
ಇಂಟರ್ನೆಟ್ ರೇಡಿಯೋದಲ್ಲಿ ಕನ್ನಡ ಹಾಡುಗಳು ಇನ್ನೂ ಪ್ರಾರಂಭವಾಗಿಲ್ಲ. ಪ್ರಸ್ತುತ ಅಂತಾರಾಷ್ಟ್ರೀಯ ರೆಟ್ರೊ, ರಾಕ್ ಅಂಡ್ ರೋಲ್, ಜಾಝ್, ಬ್ಲೂಸ್, ಓಪೇರಾ, ಸೋಲೋ, ಫಂಕ್, ಡಿಸ್ಕೊ, ಎಲೆಕ್ಟ್ರಾನಿಕ್ ಡ್ಯಾನ್ಸ್ ಮ್ಯೂಸಿಕ್, ಹಿಪ್ ಹಾಪ್, ರ್ಯಾಪ್, ರಾಕ್ ಸಂಗೀತವನ್ನು ಕೇಳಬಹುದು. ಎಫ್ ಎಂ ತರಂಗಾಂತರಗಳಲ್ಲಿ ಹರಿದು ಬರುತ್ತಿರುವ ಸಂಗೀತ ಸುಧೆ ಬೇಸರ ಮೂಡಿಸಿದರೆ ಅಂತರ್ಜಾಲ ಆಕಾಶವಾಣಿಗೆ ಕಿವಿಗೊಡಬಹುದು.
(ಏಜೆನ್ಸೀಸ್)












Click it and Unblock the Notifications