ಕೋಲಾರ ಬಳಿ ಭೀಕರ ರಸ್ತೆ ಅಪಘಾತಕ್ಕೆ 10 ಬಲಿ
ಕೋಲಾರ, ಅ.13: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಎರಡು ಬಸ್ ಗಳ ನಡುವೆ ಭೀಕರ ಮುಖಾಮುಖಿ ಢಿಕ್ಕಿ ಸಂಭವಿಸಿ ಮೂವರು ಮಹಿಳೆಯರು,ಓರ್ವ ಬಾಲಕಿ ಸೇರಿದಂತೆ 10 ಮಂದಿ ಪ್ರಯಾಣಿಕರು ಮೃತಪಟ್ಟಿದ್ದು 25ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.ಘಟನೆಯು ಕೋಲಾರ ಮುಳಬಾಗಿಲು ರಾಷ್ಟ್ರೀಯ ಹೆದ್ದಾರಿಯ ಹನುಮನಹಳ್ಳಿ ಕ್ರಾಸ್ ಬಳಿ ಸೋಮವಾರ ಮುಂಜಾನೆ 1.45ರ ಸಮಯದಲ್ಲಿ ಸಂಭವಿಸಿದೆ.
ಈ ಬಗ್ಗೆ ಮಾಹಿತಿ ನೀಡಿದ ಕೋಲಾರ ನಗರ ಪೊಲೀಸರು, ತಿರುಪತಿಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಕೆ ಎಸ್ ಆರ್ ಟಿಸಿ ಹಾಗೂ ಬೆಂಗಳೂರಿನಿಂದ ಚೆನ್ನೈಗೆ ಹೊರಟಿದ್ದ ವೋಲ್ವೊ ಬಸ್ ಗಳು ಹನುಮನಹಳ್ಳಿ ಕ್ರಾಸ್ ಬಳಿ ಅಪಘಾತಕ್ಕೀಡಾಗಿ ಈ ದುರಂತ ಸಂಭವಿಸಿದೆ. ಗಾಯಗೊಂಡ ಪ್ರಯಾಣಿಕರನ್ನು ಕೋಲಾರ ಬಳಿಯ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ತಿಳಿಸಿದರು.
ಮೃತರನ್ನು ವೋಲ್ವೊ ಬಸ್ ಚಾಲಕ ಲಕ್ಷ್ಮಯ್ಯ, ಪ್ರಯಾಣಿಕರಾದ ಚೆನ್ನೈಗೆ ತೆರಳಿದ್ದ ಅಮಿತ್ ಕುಮಾರ್ ಸಿಂಗ್, ರೇಖಾ, ಹಾಸನದವರೆನ್ನಲಾದ ನಾಗರಾಜ್, ಬೆಂಗಳೂರು ಆರ್.ಟಿ.ನಗರದ ವಿಷ್ಣುಪ್ರಿಯಾ, ಪಂಕಜ್, ಸಚಿನ್ ಎಂದು ಗುರುತಿಸಲಾಗಿದೆ. ಉಳಿದ ಮೂರು ಮಂದಿ ವಿವರಗಳು ಇನ್ನೂ ಲಭ್ಯವಾಗಿಲ್ಲ.
ಅಪಘಾತದ ತೀವ್ರತೆಗೆ ಸ್ಥಳದಲ್ಲೇ 6 ಮಂದಿ ಮೃತಪಟ್ಟಿದ್ದಾರೆ. ಆರ್.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ಇತರ ನಾಲ್ಕು ಮಂದಿಗೆ ನೀಡಿದ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಮೃತರ ಸಂಬಂಧಿಕರ ಗೋಳು ಮುಗಿಲು ಮುಟ್ಟಿದೆ. ಚೆನ್ನೈ ಮೂಲದ ಮಹಿಳೆಯೊಬ್ಬರು ಎರಡು ಕಾಲುಗಳನ್ನು ಕಳೆದುಕೊಂಡು ಮಗಳ ಮುಂದೆ ಕಣ್ಣೀರಿಡುತ್ತಿರುವ ದೃಶ್ಯ ಕರುಣಾಜನಕವಾಗಿತ್ತು.
ಅಪಘಾತ ಸುದ್ದಿ ತಿಳಿದೊಡನೆ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಪುಟ್ಟಸ್ವಾಮಿ, ಹೆಚ್ಚುವರಿ ರಕ್ಷಣಾಧಿಕಾರಿ ಫಣೀಂದರ್ ಸಿಂಗ್, ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ವೆಂಕಟರಮಣಪ್ಪ ಸೇರಿದಂತೆ ಉನ್ನತಮಟ್ಟದ ಅಧಿಕಾರಿಗಳು ಭೇಟಿ ನೀಡಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿದರು.
(ದಟ್ಸ್ ಕನ್ನಡ ವಾರ್ತೆ)
ಸತಿಸಹಗಮನಕ್ಕೆ ವೃದ್ಧೆ ಬಲಿ












Click it and Unblock the Notifications