ಗೋಡೆ ಬರಹ ಈಗ ಮಂಗಳೂರಿನ ಸರದಿ
ಮಂಗಳೂರು, ಸೆ. 25 : "ಈಗ ಅವರು ಕ್ರೈಸ್ತರನ್ನು ಹುಡುಕಿಕೊಂಡು ಬಂದಿದ್ದಾರೆ. ನಾವು ಬಾಬರಿ ಮಸೀದಿಯನ್ನು ಮರೆತೆವು. ಗುಜರಾತ ಹತ್ಯಾಕಾಂಡ ಆಗಲು ಬಿಟ್ಟೆವು. ಇದೀಗ ಕರ್ನಾಟಕ, ಒರಿಸ್ಸಾ ರಾಜ್ಯಗಳ ಸರದಿ ಇದೆ. ಮೌನವೆಂಬುದು ಅಪರಾಧ" ಎನ್ನುವ ಬರಹವುಳ್ಳ ಭಿತ್ತಿ ಪತ್ರಗಳನ್ನು ನಗರದ ವಿವಿಧೆಡೆ ಅಂಟಿಸಿ ಶಾಂತಿಗೆ ಭಂಗ ತರುವ ಕೆಲಸವನ್ನು 'ಕರ್ನಾಟಕ ಫೋರಂ ಫಾರ್ ಡಿಗ್ನಿಟಿ' ಎಂಬ ಸಂಘಟನೆ ಮಾಡಿರುವ ಘಟನೆ ಗುರುವಾರ ಬೆಳಕಿಗೆ ಬಂದಿದೆ.
ಕಳೆದ ವಾರದಿಂದ ಚರ್ಚ್ ಮೇಲಿನ ದಾಳಿಯಿಂದ ಹೊತ್ತಿ ಉರಿದಿದ್ದ ಮಂಗಳೂರು ನಿಧಾನವಾಗಿ ಸಹಜ ಸ್ಥಿತಿಗೆ ಮರಳತೊಡಗಿತ್ತು. ಜನಜೀವನ ಎಂದಿನಂತೆ ಸಾಗತೊಡಗಿರುವ ಬೆನ್ನಲ್ಲೇ ಕರ್ನಾಟಕ ಫೋರಂ ಫಾರ ಡಿಗ್ನಿಟಿ ಎಂಬ ಸಂಘಟನೆ ಉದ್ರೇಕಕಾರಿ ಬರಹವುಳ್ಳ ಭಿತ್ತಿ ಪತ್ರಗಳನ್ನು ನಗರದ ಅನೇಕ ಕಡೆಗಳಲ್ಲಿ ಅಂಟಿಸಿ ಗೊಂದಲ ಹುಟ್ಟುಹಾಕಿದೆ. ಈ ಭಿತ್ತಿ ಪತ್ರ ಅಂಟಿಸಿದ್ದ ಪೊಲೀಸ್ ಇಲಾಖೆ ತೀವ್ರ ತಲೆನೋವಾಗಿ ಪರಿಣಮಿಸಿದೆ. ಕೋಮು ಸೌಹಾರ್ಧತೆ ಕದಡುವ ಕೃತ್ಯ ಇದಾಗಿದ್ದು, ಇದರಿಂದ ಶಾಂತವಾಗಿದ್ದ ಮಂಗಳೂರು ಮತ್ತೆ ಗಲಿಬಿಲಿಗೀಡಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.
ನಗರದ ವಿವಿಧೆಡೆ ಅಂಟಿಸಲಾಗಿರುವ ಭಿತ್ತಿಪತ್ರಗಳನ್ನು ಪೊಲೀಸರು ಈಗಾಗಲೇ ಕಿತ್ತುಹಾಕಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸೂಕ್ಷ್ಮಪ್ರದೇಶದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಬಿತ್ತಿಪತ್ರ ಅಂಟಿಸಿರುವ ಸಂಘಟನೆ ಮುಖ್ಯಸ್ಥರ ಬಂಧನಕ್ಕೆ ಪೊಲೀಸರು ವ್ಯಾಪಕ ಜಾಲ ಬೀಸಿದ್ದು, ಅವರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಮಂಗಳೂರು ಜಿಲ್ಲಾಡಳಿತ ಕರ್ನಾಟಕ ಫೋರಂ ಫಾರ್ ಡಿಗ್ನಿಟಿ ಸಂಘಟನೆಯ ಮುಖ್ಯಸ್ಥರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಆದೇಶ ನೀಡಿದೆ. ಹಾಗೂ ಸಂಘಟನೆಯ ಕಾರ್ಯಕರ್ತರ ಮೇಲೆ ನಿಗಾ ಇಡುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದೆ.
ಕಳೆದ ಕೆಲ ದಿನಗಳ ಹಿಂದೆ ಮಂಗಳೂರು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಚರ್ಚೆ ಮೇಲೆ ದಾಳಿ ನಡೆದಿದ್ದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಇದರಿಂದ ಪ್ರತಿಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಬೇಕಾಯಿತು. ಮುಂದಿನ ದಿನಗಳಲ್ಲಿ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆದರೆ ಸ್ಥಳೀಯ ಜಿಲ್ಲಾಡಳಿತವನ್ನೆ ಹೊಣೆಗಾರರನ್ನಾಗಿ ಮಾಡಿ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಯಡಿಯೂರಪ್ಪ ಎಚ್ಚರಿಕೆ ನೀಡಿರುವುದನ್ನು ಇಲ್ಲಿ ನೆನೆಪಿಸಿಕೊಳ್ಳಬಹುದು.
(ದಟ್ಸ್ ಕನ್ನಡ ವಾರ್ತೆ)
ಪಾಕ್ ಪರ ಗೋಡೆಬರಹ, ಹರಿಹರ ಉದ್ವಿಗ್ನ












Click it and Unblock the Notifications