ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋಧ್ರಾ ಹತ್ಯಾಕಾಂಡ : ಮೋದಿ ಕಳಂಕ ಮುಕ್ತ

By Staff
|
Google Oneindia Kannada News

Gujarat Chief Minister Narendra Modiಅಹಮದಾಬಾದ್, ಸೆ. 25 : ಗೋಧ್ರಾ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ನೇಮಕ ಮಾಡಲಾಗಿದ್ದ ನಾನಾವತಿ ಆಯೋಗ ಇಂದು ಗುಜರಾತ್ ಸರ್ಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಿದೆ. ಗೋಧ್ರಾ ರೈಲು ದುರಂತ ಬೆಂಕಿ ಆಕಸ್ಮಿಕವಲ್ಲ, ಪೂರ್ವ ನಿಯೋಜಿತ ಕೃತ್ಯ ಎಂದು ಸ್ಪಷ್ಟಪಡಿಸಿದ್ದು, ಮುಖ್ಯಮಂತ್ರಿ ನರೇಂದ್ರ ಮೋದಿಯನ್ನು ಆರೋಪಮುಕ್ತರನ್ನಾಗಿ ಮಾಡಿದೆ.

ಈ ಹತ್ಯಾಕಾಂಡದಲ್ಲಿ ನರೇಂದ್ರ ಮೋದಿಯ ಕೈವಾಡವಿಲ್ಲ, ಅವರ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ ಎಂದು ಹೇಳಿರುವ ಆಯೋಗ ಅವರನ್ನು ನಿಷ್ಕಳಂಕಿರನ್ನಾಗಿ ಮಾಡಿದೆ. ಹಿಂಸಾಚಾರಕ್ಕೆ ತುತ್ತಾದವರಿಗೆ ರಕ್ಷಣೆ ಮತ್ತು ಪರಿಹಾರ ನೀಡದಿರುವ, ಪುನರ್ವಸತಿ ಕಲ್ಪಿಸದಿರುವ ಬಗ್ಗೆ ನರೇಂದ್ರ ಮೋದಿ ವಿರುದ್ಧವಾಗಲಿ ಸಂಪುಟ ಸಚಿವರ ವಿರುದ್ಧವಾಗಲಿ ಯಾವುದೇ ಸಾಕ್ಷಿಗಳೂ ಇಲ್ಲ ಎಂದು ನಾನಾವತಿ ವರದಿಯ ಮೊದಲ ಭಾಗದಲ್ಲಿ ಹೇಳಲಾಗಿದೆ.

ಪೂರ್ವ ನಿಯೋಜಿತ : 2002ರ ಫೆಬ್ರವರಿ 27ರಂದು ಸಾಬರಮತಿ ಎಕ್ಸ್ ಪ್ರೆಸ್ ರೈಲಿನ ಎಸ್ 6 ಬೋಗಿಯನ್ನು ಸುಟ್ಟಿರುವುದು ಪೂರ್ವ ನಿಯೋಜಿತ ಪಿತೂರಿ. ಇಡೀ ಘಟನೆಯ ರೂವಾರಿ ಮೌಲ್ವಿ ಉಮರ್ಜಿ. ರಾಜಾ ಕುರ್ಕುರ್ ಮತ್ತು ಸಲೀಂ ಪಾನವಾಲಾ ಫೆಬ್ರವರಿ 26 ರಾತ್ರಿ 140 ಲೀಟರ್ ಪೆಟ್ರೋಲನ್ನು ಖರೀದಿಸಿದ್ದರು. ಆ ಪ್ರದೇಶದಲ್ಲಿ ಭೀತಿಯನ್ನು ಹಬ್ಬಿಸುವ ದೃಷ್ಟಿಯಿಂದ ರೈಲನ್ನು ಸುಡುವ ಯೋಜನೆಯನ್ನು ಅಮನ್ ಅತಿಥಿ ಗೃಹದಲ್ಲಿ ರೂಪಿಸಲಾಯಿತು ಎಂದು ವರದಿ ತಿಳಿಸಿದೆ. ಪಿತೂರಿಯಲ್ಲಿ ಶೌಕತ್ ಲಾಲು, ಇಮ್ರಾನ್ ಶೇರಿ, ರಫೀಕ್ ಬಟುಕ್, ಸಲೀಂ ಜರ್ದಾ, ಜಬ್ಬೀರ್ ಮತ್ತು ಶೇರಜ್ ಬಾಲಾ ಕೂಡ ಭಾಗಿಯಾಗಿದ್ದಾರೆಂದು ವರದಿ ಬಹಿರಂಗಪಡಿಸಿದೆ.

ಬಿಜೆಪಿ ಪಾಳಯದಲ್ಲಿ ಹರ್ಷ : ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸುತ್ತಿದ್ದಂತೆ ಕಾಂಗ್ರೆಸ್ ಪಕ್ಷದವರು ಸಭಾತ್ಯಾಗ ಮಾಡಿದ್ದಾರೆ. ಆದರೆ ಬಿಜೆಪಿ ಪಾಳಯದಲ್ಲಿ ಹರ್ಷದ ವಾತಾವರಣ ಸೃಷ್ಟಿಯಾಗಿದೆ. 'ಎಲ್ಲ ಸಾಕ್ಷಿಗಳನ್ನು ಕೂಲಂಕಷವಾಗಿ ಪರಿಶೀಲಿಸಿರುವ ಆಯೋಗ, ಆಡಳಿತ ಯಂತ್ರ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿಲ್ಲ' ಎಂದು ಹೇಳಿದೆ ಎಂದು ಬಿಜೆಪಿ ಸರ್ಕಾರ ವಕ್ತಾರ ಜೈ ನಾರಾಯಣ ವ್ಯಾಸ್ ಸಂತಸ ವ್ಯಕ್ತಪಡಸಿದ್ದಾರೆ. ಗೋಧ್ರಾ ಹತ್ಯಾಕಾಂಡದ ವಿಚಾರಣೆ ನಡೆಸಿದ್ದ ಯುಸಿ ಬ್ಯಾನರ್ಜಿ ಸಮಿತಿ ವ್ಯತಿರಿಕ್ತ ವರದಿ ನೀಡಿತ್ತು.

ಗೋಧ್ರಾ ಹತ್ಯಾಕಾಂಡವಾದ ನಂತರದ ಘಟನೆಗಳಿಗೆ ಕಾರಣವಾದ ವಾಸ್ತವಾಂಶ ಮತ್ತು ಸಂದರ್ಭಗಳ ಕುರಿತ ವರದಿ ಡಿಸೆಂಬರ್ 31ರೊಳಗಾಗಿ ಸಲ್ಲಿಕೆಯಾಗುವ ನಿರೀಕ್ಷೆಯಿದೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X