ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಡ್ಜ್ ಪತ್ನಿಯ ನಿದ್ದೆಗೆಡಿಸಿದ ಸಾಯಿಬಾಬಾ!

By Staff
|
Google Oneindia Kannada News

ಬೆಂಗಳೂರು, ಸೆ.24: ಹಲವಾರು ವರ್ಷಗಳಿಂದ ಬೆಂಗಳೂರಿನ ಮಾಗಡಿರಸ್ತೆಯಲ್ಲಿರುವ ಪುಟ್ಟ ಶ್ರೀ ಶಿರಡಿ ಸಾಯಿಬಾಬಾ ಮಂದಿರಕ್ಕೆ ಗಂಡಾಂತರ ಎದುರಾಗಿದೆ. ಪಾಲಿಕೆ ನಿಯಮಗಳನ್ನು ಉಲ್ಲಂಘಿಸಿ ದೇವಸ್ಥಾನವನ್ನು ನಿರ್ಮಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಂದಿರವನ್ನು ಕೆಡವಲು ಮುಂದಾಗಿದ್ದಾರೆ. ಆದರೆ ಮಂದಿರವನ್ನು ಕೆಡವಲು ನೀತಿ ನಿಯಮಗಳು ಅಡ್ಡ ಬರುತ್ತಿಲ್ಲ,ಹೈಕೋರ್ಟ್ ನ್ಯಾಯಾಧೀಶರ ಪತ್ನಿ ದೇವಸ್ಥಾನವನ್ನು ಕೆಡವಲು ಬಿಬಿಎಂಪಿ ಅಧಿಕಾರಿಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ದೇವಾಲಯದ ಆಡಳಿತ ಮಂಡಳಿ ಆರೋಪಿಸುತ್ತಿದೆ.

10 ವರ್ಷಗಳಷ್ಟು ಹಳೆಯದಾದ ಈ ದೇವಾಲಯವನ್ನು ಮಾಗಡಿ ರಸ್ತೆಯ ಕಾಮಾಕ್ಷಿ ಪಾಳ್ಯದ ಖಾಸಗಿ ಜಮೀನಿನಲ್ಲಿ ನಿರ್ಮಿಸಲಾಗಿದೆ. ಸಾಯಿಬಾಬಾ ಭಕ್ತರೊಬ್ಬರು ಈ ಜಮೀನನ್ನು ದೇವಸ್ಥಾನಕ್ಕಾಗಿ 20 ವರ್ಷಗಳ ಕಾಲ ಭೋಗ್ಯಕ್ಕೆ ನೀಡಿದ್ದಾರೆ.ಮೂಕ ಮತ್ತು ಕಿವುಡ ಮಕ್ಕಳಿಗಾಗಿ ದೇವಾಲಯದ ಟ್ರಸ್ಟ್ ಶಾಲೆಯೊಂದನ್ನು ನಡೆಸುತ್ತಿದೆ. ಎಲ್ಲ ಸುಸೂತ್ರವಾಗೇ ನಡೆಯುತ್ತಿತ್ತು. ಸಮಸ್ಯೆ ಶುರುವಾಗಿದ್ದು ದೇವಸ್ಥಾನದಲ್ಲಿ ಭಜನೆ ಕಾರ್ಯಕ್ರಮ ಮುಗಿದ ಎರದು ದಿನಗಳ ನಂತರ ಅಂದರೆ ಸೆ.16, 17ರಂದು. ಸಾಯಿಬಾಬಾ ಭಜನೆಯನ್ನು ದೇವಸ್ಥಾನದ ಆಡಳಿತ ಮಂಡಳಿ ಪ್ರತಿವರ್ಷವೂ ಸಾಂಗವಾಗಿ ಆಚರಿಸಿಕೊಳ್ಳುತ್ತಾ ಬಂದಿದೆ.ಹಾಗೆಯೇ ಈ ಬಾರಿಯೂ ದಿನದ ಇಪ್ಪತ್ಕಾಲಕ್ಕು ಗಂಟೆಯೂ ಸಾಯಿಬಾಬಾ ಭಜನೆಯನ್ನು ಭಕ್ತಿಯಿಂದ ಆಚರಿಸಲಾಯಿತು.

ನ್ಯಾಯಾಧೀಶರ ಪತ್ನಿಯ ನಿದ್ದೆಗೆ ಭಂಗ
''ನಿರಂತರವಾಗಿ ಗಂಟೆಗಳು ಶಬ್ದ ಮಾಡುತ್ತಿರುತ್ತವೆ'' ಎಂಬ ಕಾರಣಕ್ಕೆ ದೇವಾಲಯವನ್ನು ಮತ್ತೊಂದೆಡೆಗೆ ಸ್ಥಳಾಂತರಿಸಿ ಎಂದು ನ್ಯಾಯಾಧೀಶರ ಪತ್ನಿ ಸೆ.17ರಂದು ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ದೂರಿದರು.ಅಷ್ಟಕ್ಕೂ ಸುಮ್ಮನಾಗದ ನ್ಯಾಯಾಧೀಶರ ಪತ್ನಿ ಟ್ರಸ್ಟ್ ನ ಅಧ್ಯಕ್ಷರಾದ ರಾಮಪ್ರಸಾದ್ ಗುರೂಜಿ ಅವರ ಮನೆಗೆ ಹೋಗಿ ದೇವಸ್ಥಾನವನ್ನು ಆದಷ್ಟು ಬೇಗ ಸ್ಥಳಾಂತರಿಸಬೇಕು ಎಂದು ಧಮಕಿ ಹಾಕಿದರು. ಅದೇ ದಿನ ಬೆಳಗ್ಗೆ 11 ಗಂಟೆಗೆ ಸರಿಯಾಗಿ ಬಿಬಿಎಂಪಿ ಅಧಿಕಾರಿಗಳು ದೇವಸ್ಥಾನಕ್ಕೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದರು. ಮಾರನೆ ದಿನ ಸಂಜೆ 6 ಗಂಟೆಗೆ ಸರಿಯಾಗಿ ದೇವಸ್ಥಾನವನ್ನು ಕೆಡವಲಾಗುತ್ತದೆ ಎಂದು ಆದೇಶವನ್ನೂ ಹೊರಡಿಸಿ ಬಿಟ್ಟರು.

ಉರುಳಿಸುವ ಕಾರ್ಯಕ್ಕೆ ಬ್ರೇಕ್ ಬಿತ್ತು
''ಬಿಬಿಎಂಪಿ ಅಧಿಕಾರಿಗಳ ಈ ನಿರ್ಣಯದ ಬಗ್ಗೆ ನಮಗೆ ಆಶ್ಚರ್ಯವಾಗುತ್ತಿಲ್ಲ, ಅವರು ಬಂದ ವೇಗ ನಮ್ಮನ್ನು ಚಕಿತಗೊಳಿಸಿದೆ'' ಎನ್ನುತ್ತಾರೆ ರಾಮಪ್ರಸಾದ್ ಗುರೂಜಿ. ದೇವಸ್ಥಾನವನ್ನು ಸ್ಥಳಾಂತರಿಸದಿದ್ದರೆ ಧ್ವಂಸ ಮಾಡಬೇಕಾಗುತ್ತದೆ ಎಂದು ಬಿಬಿಎಂಪಿ ಎಚ್ಚರಿಕೆ ಕೊಟ್ಟಿತ್ತು. ಈ ಸಂಬಂಧ ಟ್ರಸ್ಟ್ ನ ಆಡಳಿತ ಮಂಡಳಿ ಹಾಗೂ ಭಕ್ತಾದಿಗಳು ಕಾನೂನು ಸಚಿವ ಎಸ್.ಸುರೇಶ್ ಕುಮಾರ್ ಅವರನ್ನು ಭೇಟಿಯಾಗಿ ತಮ್ಮ ಮನವಿ ಸಲ್ಲಿಸಿದರು. ಹಾಗಾಗಿ ಸದ್ಯಕ್ಕೆ ಮಂದಿರ ಉರುಳಿಸುವ ಕಾರ್ಯಕ್ಕೆ ತಾತ್ಕಾಲಿಕವಾಗಿ ಬ್ರೇಕ್ ಬಿದ್ದಿದೆ. ಮುಂದೆಯೂ ಈ ರೀತಿಯ ಅಪಾಯ ಒದಗದಂತೆ ದೇವಾಲಯಕ್ಕೆ ಶಾಶ್ವತ ಪರಿಹಾರ ಕಲ್ಪಿಸಿ ಎಂದು ಭಕ್ತಾದಿಗಳು ಮನವಿ ಮಾಡುತ್ತಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X