ಮಂಗಳೂರು :ಭಜರಂಗದಳ ಕಾರ್ಯಕರ್ತರ ಬಂಧನ
ಮಂಗಳೂರು, ಸೆ. 15 : ಮತಾಂತರ ವಿವಾದಕ್ಕೆ ಸಂಬಂಧಿಸಿದಂತೆ ಭಾನುವಾರ ಭಜರಂಗದಳ ಕಾರ್ಯಕರ್ತರು ನಡೆಸಿದ ದಾಳಿಯನ್ನು ಖಂಡಿಸಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗತೊಡಗಿದೆ. ಇಂದು ಬೆಳಗಿನಿಂದಲೇ ಆರಂಭವಾಗಿರುವ ಪ್ರತಿಭಟನೆ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ. ಘಟನೆಗೆ ಸಂಬಂಧಿಸಿದಂತೆ ಐದು ಮಂದಿ ಭಜರಂಗದಳ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಪ್ರತಿಭಟನಾನಿರತ ವ್ಯಕ್ತಿಯೊಬ್ಬನಿಗೆ ಚೂರಿ ಇರಿದ ಘಟನೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇಂದು ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯ ಹಿನ್ನೆಲೆಯಲ್ಲಿ ಪರಿಸ್ಥಿತಿ ಮತ್ತಷ್ಟು ಜಟಿಲವಾಗಿದೆ. ಕಲ್ಲು ತೂರಾಟ, ಟೈರ್ ಗಳಿಗೆ ಬೆಂಕಿ ಹಚ್ಚಿರುವ ಪ್ರಕರಣ ನಡೆದಿವೆ. ಗುಂಪು ಚದುರಿಸಲು ಪೊಲೀಸರು ಅಶ್ರವಾಯು ಪ್ರಯೋಗಿಸಿ ಲಾಠಿ ಜಾರ್ಜ್ ನಡೆಸಿದ್ದಾರೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ಸಾಕಷ್ಟು ಶ್ರಮ ವಹಿಸಲಾಗುತ್ತಿದೆ. ಮಂಗಳೂರು ಬೂದಿಮುಚ್ಚಿದ ಕೆಂಡದಂತಾಗಿದೆ. ಈ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ನಿಷೇಧಾಜ್ಞೆಯನ್ನು ಹೇರಲಾಗಿದೆ. ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಶಾಲಾ ಕಾಲೇಜುಗಳಿಗೆ ರಜೆ ಘೋಷಸಲಾಗಿದೆ. ಸರ್ಕಾರಿ ಕಚೇರಿಗಳು ಕಾರ್ಯದಲ್ಲಿ ವ್ಯತ್ಯಯ ಉಂಟಾಗಿದೆ. ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ. ಬಂಟ್ವಾಳದ ಕಲ್ಲಡ್ಕದಲ್ಲಿ ಎರಡು ಅಂಗಡಿಗಳು ಧ್ವಂಸಗೊಂಡಿವೆ. ಪ್ರತಿಭಟನಾಕಾರರ ಆಕ್ರೋಶಕ್ಕೆ ಕಾರೊಂದು ಪುಡಿಯಾಗಿದೆ.
ಕಲ್ಲು ತೂರಾಟದಲ್ಲಿ ಐವರು ಪೊಲೀಸರಿಗೆ ಗಾಯವಾಗಿದೆ. ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾದ 53 ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ನಗರದ ಕುಲಶೇಖರ, ಉಲ್ಲಾಲ್, ವಾಮಂಜೂರು ಚರ್ಚ್ ಗಳ ಮುಂದೆ ಕ್ರೈಸ್ತರು ನಡೆಸುತ್ತಿರುವ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿವೆ. ಚರ್ಚ್ ಗಳ ಮೇಲೆ ದಾಳಿ ನಡೆಸಿರುವ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಕ್ರೈಸ್ತ ಮುಖಂಡರು ಆಗ್ರಹಿಸಿದ್ದಾರೆ. ನಗರದಲ್ಲಿ ಅಪರಾಧಿ ಪ್ರಕ್ರಿಯೆ ಸಂಹಿತೆ(ಸಿಆರ್ ಪಿಸಿ) 144 ಸೆಕ್ಷನ್ ಅನ್ವಯ ಮೂರು ದಿನಗಳ ಕಾಲ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ. ಭಂಟ್ವಾಳಕ್ಕೂ ಕೂಡ ನಿಷೇಧಾಜ್ಞೆ ವಿಸ್ತರಿಸಲಾಗಿದೆ.
ಮತಾಂತರಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಭಜರಂಗದಳ ಕಾರ್ಯಕರ್ತರು ಏಕಕಾಲದಲ್ಲಿ ಚಿಕ್ಕಮಗಳೂರು, ಉಡುಪಿ ಹಾಗೂ ಮಂಗಳೂರು ಜಿಲ್ಲೆಯಲ್ಲಿರುವ ಆರು ಚರ್ಚ್ ಗಳ ದಾಳಿ ನಡೆಸಿ ಪಿಠೋಪಕರಣಗಳನ್ನು ಧ್ವಂಸ ಮಾಡಿರುವ ಘಟನೆ ಭಾನುವಾರ ನಡೆದಿತ್ತು. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಪರಿಸ್ಥಿತಿ ಉದ್ನಿಗ್ನಗೊಂಡಿದ್ದರಿಂದ ಲಾಠಿ ಪ್ರಹಾರ ನಡೆಸಲಾಗಿತ್ತು.
ಗೃಹ ಸಚಿವ ರಾಜೀನಾಮೆ ದೇವೇಗೌಡ ಒತ್ತಾಯ
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಸಂಘ ಪರಿವಾರ ಕೃತ್ಯದಿಂದ ಅಲ್ಪಸಂಖ್ಯಾತರು ಜೀವಿಸುವುದು ಕಷ್ಟವಾಗಿದೆ. ಮಂಗಳೂರಿನಲ್ಲಿ ನಡೆದಿರುವ ದಾಳಿ ನಾಚಿಕೆಗೇಡಿನ ಕೆಲಸವಾಗಿದೆ. ಘಟನೆಗೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು ಗೃಹ ಸಚಿವ ವಿ.ಎಸ್. ಆಚಾರ್ಯ ರಾಜೀನಾಮೆ ನೀಡಬೇಕು ಎಂದು ದೇವೇಗೌಡರು ಆಗ್ರಹಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಮತಾಂತರ ಪ್ರಕರಣ: ಉಡುಪಿ ಪೊಲೀಸ್ ವರದಿ
ಮಂಗಳೂರು ಮುಂದುವರೆದ ಉದ್ವಿಗ್ನ ಪರಿಸ್ಥಿತಿ
ಚರ್ಚ್ ಮೇಲೆ ದಾಳಿ: ಮಂಗಳೂರಿಗೆ ಸಿಎಂ ಭೇಟಿ












Click it and Unblock the Notifications