ಲೋಕಸಭೆ ಚುನಾವಣೆಗೆ ಸ್ಪರ್ಧೆ ಇಲ್ಲ : ದೇವೇಗೌಡ
ಬೆಂಗಳೂರು, ಸೆ. 15 : ಕಳೆದ 35 ವರ್ಷಗಳ ಕಾಲ ರಾಜಕೀಯವನ್ನೆ ಉಸಿರಾಡಿದ ಜೆಡಿಎಸ್ ವರಿಷ್ಠ ದೇವೇಗೌಡರಿಗೆ ಇದೀಗ ರಾಜಕೀಯ ಸಾಕೆನ್ನಿಸಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳುವ ಮೂಲಕ ಜೆಡಿಎಸ್ ಕಾರ್ಯಕರ್ತರಲ್ಲಿ ನಿರಾಶೆ ಮೂಡಿಸಿದ್ದಾರೆ. ಆದರೆ ಅವರನ್ನು ರಾಜಕೀಯವಾಗಿ ವಿರೋಧಿಸುವವರ ಗುಂಪಿಗೆ ಆಶ್ಚರ್ಯವನ್ನು ತರಿಸಿದೆ.
ವಿಷಯ ಇಷ್ಟೆ, ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಸ್ಥಿತಿ ಅಧೋಗತಿಗೆ ಇಳಿದಿದೆ. ನೈತಿಕತೆಗೆ ಬೆಲೆ ಇಲ್ಲ ಎಂದು ವಿಷಾಧ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಇಂದು ನಡೆಯುತ್ತಿರುವ ಭಯೋತ್ಪಾದನೆ ಚಟುವಟಿಕೆ, ಕೋಮುದಳ್ಳುರಿಯಿಂದ ಮುಂದಿನ ದಿನಗಳಲ್ಲಿ ಭಾರಿ ಅಪಾಯ ಕಾದಿದೆ ಎಂದ ಅವರು, ಇಂದು ಪ್ರತಿಯೊಬ್ಬರು ಅವಲೋಕನ ಮಾಡಿಕೊಳ್ಳುವ ಕಾಲ, ನಮ್ಮನ್ನೆ ನಾವೇ ಪ್ರಶ್ನಿಸಿಕೊಳ್ಳುವ ಸಂದಿಗ್ಧತೆಯಲ್ಲಿ ಬಂದು ನಿಂತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.
ದೇಶಕ್ಕೆ ಮಾರಕವಾಗಿರುವ ಅಣು ಒಪ್ಪಂದ ಬೇಕಿತ್ತಾ ಎಂದು ಪ್ರಶ್ನಿಸಿದ ಗೌಡರು, ಕೇಂದ್ರದ ಅಧಿಕಾರ ಚುಕ್ಕಾಣಿ ಹಿಡಿದಿರುವ ನಾಯಕರು ಯಾರ ಮರ್ಜಿಗಾಗಿ ಕೆಲಸ ಮಾಡುತ್ತಿದ್ದಾರೆ. ಯಾವ ಸ್ವಾರ್ಥ ಅದರಲ್ಲಿ ಅಡಗಿದೆ. ಪರಿಸ್ಥಿತಿ ಹೀಗೆ ಮುಂದುವರೆದಲ್ಲಿ ಶೀಘ್ರದಲ್ಲಿ ಭಾರಿ ಬೆಲೆ ತೆರಬೇಕಿರುವ ಕಾಲ ದೂರವಿಲ್ಲ ಎಂದು ಎಚ್ಚರಿಕೆ ನೀಡಿದರು. ಚರ್ಚ್ ಗಳ ಮೇಲೆ ಸಂಘ ಪರಿವಾರ ಕಾರ್ಯಕರ್ತರು ನಡೆಸುತ್ತಿರುವ ದಾಳಿಯನ್ನು ತೀವ್ರ ಖಂಡಿಸಿ ಅವರು, ಇವರಿಗೆ ಕಡಿವಾಣ ಹಾಕಲು ಸರ್ಕಾರಕ್ಕೆ ತಾಕತ್ತಿಲ್ಲವೆ, ಇದರ ಪರಿಣಾಮ ಏನಾಗಲಿದೆ ಎನ್ನುವುದನ್ನು ಎಲ್ಲರೂ ಕ್ಷಣ ಕಾಲ ಯೋಚಿಸಿಬೇಕಾಗಿದೆ ಎಂದು ಕಿವಿ ಮಾತು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications