ಗಣೇಶ ಪ್ರತಿಷ್ಠಾಪನೆಗೆ ಅನುಮತಿ ಪತ್ರ ಕಡ್ಡಾಯ
ಬೆಂಗಳೂರು, ಸೆ. 2 : ಸಂಘ ಸಂಸ್ಥೆಗಳು ಹಾಗೂ ಜನರು ಸಾರ್ವಜನಿಕ ಸ್ಥಳಗಳಲ್ಲಿ ಗಣೇಶನ ವಿಗ್ರಹಗಳನ್ನು ಇಡಲು ಬಿಬಿಎಂಪಿ, ಬೆಸ್ಕಾಂ, ಅಗ್ನಿಶಾಮಕ ದಳ ಹಾಗೂ ಸಂಚಾರಿ ಪೊಲೀಸರಿಂದ ಅನುಮತಿ ಪತ್ರ ಪಡೆಯುವುದು ಕಡ್ಡಾಯ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ಅಲ್ಲದೆ ಗಣೇಶನನ್ನು ಸಾರ್ವಜನಿಕ ಸ್ಥಳಗಳಲ್ಲಿ ಇಡುವವರು ಸ್ಥಳೀಯ ಪೊಲೀಸ್ ಠಾಣೆಯಿಂದ ಅನುಮತಿ ಪಡೆಯುವುದನ್ನು ಕಡ್ಡಾಯ ಮಾಡಲಾಗಿದೆ. ಗಣೇಶ ವಿಗ್ರಹವನ್ನು ಯಾವ ಸ್ಥಳದಲ್ಲಿ ವಿಸರ್ಜಿಸಲಾಗುವುದು ಮತ್ತು ಗಣೇಶನ ಮೆರವಣಿಗೆ ಸಾಗುವ ಮಾರ್ಗ ಕುರಿತ ಮಾಹಿತಿಯನ್ನು ಪೊಲೀಸರಿಗೆ ನೀಡಿ ಅನುಮತಿ ಪಡೆಯ ಬೇಕು. ಅನುಮತಿ ನಂತರ ಪೊಲೀಸರು ನೀಡುವ ಸಲಹೆ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
ಹಾಗೆಯೇ ಗಣೇಶ ವಿಗ್ರಹ ಇಟ್ಟ ಸ್ಥಳದಲ್ಲಿನ ಭದ್ರತೆಯನ್ನು ಕಾರ್ಯಕ್ರಮದ ಆಯೋಜಕರೇ ಹೊರಬೇಕು. ಬೆಳಗ್ಗೆ 6 ರಿಂದ ರಾತ್ರಿ 10ರ ವರೆಗೆ ಮಾತ್ರ ಧ್ವನಿವರ್ಧಕಗಳನ್ನು ಬಳಸಬೇಕು. ಕಾರ್ಯಕ್ರಮಗಳಲ್ಲಿ ಗಣ್ಯವ್ಯಕ್ತಿಗಳು ಭಾಗವಹಿಸುವಂತಿದ್ದರೆ ಈ ಕುರಿತು ಪೊಲೀಸರಿಗೆ ಮುಂಚಿತವಾಗಿ ಮಾಹಿತಿ ನೀಡಬೇಕು. ಗಣೇಶನ ಮೆರವಣಿಗೆ ರಾತ್ರಿ 10ಗಂಟೆಗೂ ಮುನ್ನ ಮಾಡಬೇಕು. ಮೆರವಣಿಗೆ ಸೂಕ್ಷ್ಮ ಪ್ರದೇಶಗಳಲ್ಲಿ ಸಾಗುವಂತಿದ್ದರೆ ಮಾರ್ಗ ಬದಲಾಯಿಸಲು ಪರ್ಯಾಯ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications