ಆಪರೇಷನ್ ಕಮಲ ತಿರುಗುಬಾಣವಾಗಲಿದೆ : ಧರ್ಮಸಿಂಗ್
ಬೆಂಗಳೂರು, ಆ. 28 : ಆಪರೇಶನ್ ಕಮಲ ತಿರುಗಬಾಣವಾಗಲಿದೆ. ಬಿಜೆಪಿಯಲ್ಲಿ ಭುಗಿಲೆದ್ದಿರುವ ಬಂಡಾಯದಿಂದ ರಾಜ್ಯದಲ್ಲಿ ಶೀಘ್ರ ರಾಷ್ಟ್ರಪತಿ ಆಡಳಿತ ಜಾರಿಯಾಗುವ ಸಾಧ್ಯತೆಗಳಿವೆ ಎಂದು ಮಾಜಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್ ಭವಿಷ್ಯ ನುಡಿದ್ದಾರೆ.
ಗುರುವಾರ ನಗರದಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಣದ ಮದದಲ್ಲಿರುವ ತೇಲಾಡುತ್ತಿರುವ ಬಿಜೆಪಿ ಸರ್ಕಾರ ಶೀಘ್ರದಲ್ಲಿ ಪತನವಾಗಲಿದೆ ಎಂದರು. ಕಳೆದ ಕೆಲ ದಿನಗಳ ಹಿಂದೆ ಆಪರೇಶನ್ ಹೆಸರಿನಲ್ಲಿ ಅನ್ಯ ಪಕ್ಷಗಳ ಶಾಸಕರನ್ನು ಹಣ ಹಾಗೂ ಖುರ್ಚಿಯ ಆಮಿಷ ತೋರಿಸಿ ಪಕ್ಷಕ್ಕೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅದಕ್ಕೆ ಬಿಜೆಪಿ ನಾಯಕರು ಭಾರಿ ಬೆಲೆ ಕಟ್ಟಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ರೈತರ ಹೆಸರಿನಲ್ಲಿ ಅಧಿಕಾರ ಹಿಡಿದಿರುವ ಯಡಿಯೂರಪ್ಪ ಇಲ್ಲಿಯವರೆಗೂ ರೈತ ವಿರೋಧಿ ಕೆಲಸವನ್ನೆ ಮಾಡಿಕೊಂಡು ಬಂದಿದ್ದಾರೆ ಎಂದು ಅವರು ಕಿಡಿಕಾರಿದರು.
ಅನ್ಯ ಪಕ್ಷಗಳಿಂದ ವಲಸೆ ಹೋಗಿರುವವರಿಗೆ ಮಣೆ ಹಾಕುತ್ತಿರುವ ಯಡಿಯೂರಪ್ಪ ಅವರ ಕ್ರಮವನ್ನು ಖಂಡಿಸಿ ಬಿಜೆಪಿಯಲ್ಲಿ ಈಗಾಗಲೇ ಬಂಡಾಯ ಸ್ಫೋಟಗೊಂಡಿದೆ. ಅದು ಇಷ್ಟಕ್ಕೆ ನಿಲ್ಲುವ ಸಾಧ್ಯತೆಗಳು ಕಡಿಮೆಯಾಗಿವೆ. ನಿಗಮ ಮಂಡಳಿಯಲ್ಲಿ ಬಂಡಾಯಗಾರರಿಗೆ ಸ್ಥಾನ ಕಲ್ಪಿಸಿದಿದ್ದರೆ ಬಿಜೆಪಿ ಸರ್ಕಾರಕ್ಕೆ ಗಂಡಾಂತರ ಕಾದಿದೆ. ಪರಿಣಾಮವಾಗಿ ರಾಜ್ಯದಲ್ಲಿ ಮತ್ತೆ ರಾಷ್ಟ್ರಪತಿ ಆಡಳಿತ ಬರುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ ಎಂದು ಧರ್ಮಸಿಂಗ್ ವ್ಯಂಗ್ಯವಾಡಿದರು.
(ದಟ್ಸ್ ಕನ್ನಡ ವಾರ್ತೆ)
ರಾಜ್ಯ ಬಿಜೆಪಿಯಲ್ಲಿ ಬಂಡಾಯದ ಬಿಸಿ












Click it and Unblock the Notifications