ದಸರಾ ಹಬ್ಬ : ಸಾರ್ವಜನಿಕ ಸಭೆ ನಡೆಸಿದ ಮಣಿವಣ್ಣನ್
ಮೈಸೂರು, ಆ. 7 : ಐತಿಹಾಸಿಕ ದಸರಾ ಹಬ್ಬವನ್ನು ಶಾಂತಿ ಸೌಹಾರ್ಧತೆಯ ಮೂಲಕ ಯಶಸ್ವಿಯಾಗಿ ಆಚರಿಸುವ ಸಲುವಾಗಿ ಮೈಸೂರು ಜಿಲ್ಲಾಧಿಕಾರಿ ಮಣಿವಣ್ಣನ್ ಮಂಗಳವಾರ ಸಾರ್ವಜನಿಕರೊಂದಿಗೆ ಚರ್ಚೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ನಗರದ ಅನೇಕ ಗಣ್ಯರು ಪಾಲ್ಗೊಂಡು ಸಲಹೆ ಸೂಚನೆಗಳನ್ನು ನೀಡಿದರು. ಅಲ್ಲದೇ ದಸರಾ ಹಬ್ಬವನ್ನು ಹೇಗೆ ಆಚರಿಸಿದರೆ ಉತ್ತಮ ಎನ್ನುವ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ತಿಳಿಯಲು ಮಹಾನಗರ ಪಾಲಿಕೆ ಆವರಣದಲ್ಲಿ ಬಾಕ್ಸ್ ಇಡಲಾಗಿದ್ದು, ಸಲಹೆ-ಸೂಚನೆಗಳನ್ನು ಬರೆದು ಹಾಕಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಮೈಸೂರು ಗ್ರಾಹಕರ ಪರಿಷತ್ತಿನ ಡಾ. ಬಾಮಿ ಶೆಣೈ, ಎಂ.ಲಕ್ಷ್ಮಣ, ಮೈಸೂರು ಕೈಗಾರಿಕೆಗಳ ಸಂಘದ ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್, ಉದ್ಯಮಿ ಅಶ್ವಿನ್ ರಂಜನ್, ಸಾಹಿತಿ ನಂಜರಾಜು ಅರಸು, ಮಾಜಿ ಮೇಯರ್ ನರಸಿಂಹ ಅಯ್ಯಂಗಾರ್, ಕನ್ನಡ ಚಳವಳಿ ಮುಖಂಡ ತಾಯೂರು ವಿಠ್ಠಲ್ ಮೂರ್ತಿ, ಡಾ. ಎನ್.ರಮೇಶ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎಂ.ಬಿ.ವಿಶ್ವನಾಥ್, ನಗರಪಾಲಿಕೆ ಆಯುಕ್ತ ಕೆ.ಎನ್.ನಿಂಗಪ್ಪ, ಜಿಲ್ಲಾಧಿಕಾರಿಗಳ ಸಹಾಯಕ ಅಧಿಕಾರಿ ಪಿ.ಸಿ.ಜಯಣ್ಣ ಭಾಗವಹಿಸಿದ್ದರು.
ಭಯೋತ್ಪಾದನೆಯ ಭೀತಿ ರಾಜ್ಯಾದ್ಯಂತ ಆವರಿಸಿರುವುದರಿಂದ ದಸರಾ ಹಬ್ಬದ ಸಂದರ್ಭದಲ್ಲಿ ಹೆಚ್ಚಿನ ಭದ್ರತೆ ಒದಗಿಸುವಂತೆ ಸಭೆಯಲ್ಲಿ ಒಕ್ಕೂರಲಿನ ಮಾತು ಕೇಳಿ ಬಂದಿತು. ದಸರಾ ಹಬ್ಬ ವೀಕ್ಷಿಸಲು ಬರುವ ಪ್ರವಾಸಿಗರಿಗೆ ವಿಶೇಷ ವಸತಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಚರ್ಚೆ ನಡೆಯಿತು. ದಸರಾ ಅಂಗವಾಗಿ ನಗರದಲ್ಲಿ ಒಂಬತ್ತು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ವಿಶ್ವವಿಖ್ಯಾತ ಜಂಬೂ ಸವಾರಿಯನ್ನು ವೀಕ್ಷಿಸಲು ಬರುವ ಎಲ್ಲರನ್ನು ತಪಾಸಣೆಗೆ ಒಳಪಡಿಸುವ ಭರವಸೆಯನ್ನು ಜಿಲ್ಲಾಧಿಕಾರಿ ಮಣಿವಣ್ಣನ್ ನೀಡಿದರು.
(ದಟ್ಸ್ ಕನ್ನಡ ವಾರ್ತೆ)
ನಾಡಹಬ್ಬ ದಸರಾ ಮಹೋತ್ಸವಕ್ಕೆ ಪೂರ್ವಸಿದ್ಧತೆ











Click it and Unblock the Notifications