ಅಣು ಬಿಕ್ಕಟ್ಟಿಗೆ ಎಡ ಪಕ್ಷಗಳ ಅಂತಿಮ ಗಡುವು
ನವದೆಹಲಿ, ಜು. 4 : ನಾಗರಿಕ ಪರಮಾಣು ಒಪ್ಪಂದ ವಿಷಯದಲ್ಲಿ ಉಂಟಾಗಿರುವ ಬಿಕ್ಕಟ್ಟು ತೀವ್ರಗೊಂಡಿರುವ ಹಿನ್ನಲೆಯಲ್ಲಿ ಶುಕ್ರವಾರ ಎಡಪಕ್ಷಗಳ ನಡೆಸಿದ ನಿರ್ಣಾಯಕ ಸಭೆ ಮುಕ್ತಾಯಗೊಂಡಿದೆ. ಅಣು ಒಪ್ಪಂದ ಕುರಿತು ಪ್ರಧಾನಮಂತ್ರಿ ತಮ್ಮ ಸ್ಪಷ್ಟವಾದ ನಿಲುವನ್ನು ಜು. 7ರೊಳಗಾಗಿ ಘೋಷಿಸಬೇಕು ಎಂದು ಎಡಪಕ್ಷಗಳ ಮುಖಂಡರು ಯುಪಿಎ ಸರ್ಕಾರಕ್ಕೆ ತಾಕೀತು ಮಾಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಿಪಿಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್, ನಾಗರಿಕ ಪರಮಾಣು ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಸ್ಪಷ್ಟ ನಿಲುವು ತಿಳಿದು ಬಂದಿಲ್ಲ. ಆದ್ದರಿಂದ ಈ ವಿಷಯದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಲುವೇನು ಎನ್ನುವುದನ್ನು ಜು.7ರೊಳಗೆ ತಿಳಿಸಬೇಕು ಎಂದು ಕೇಂದ್ರದ ವಿದೇಶಾಂಗ ಖಾತೆ ಸಚಿವ ಪ್ರಣವ್ ಮುಖರ್ಜಿ ಅವರಿಗೆ ಪತ್ರ ಬರೆಯಲಾಗಿದೆ ಎಂದರು.
ಕೇಂದ್ರ ಸರ್ಕಾರದ ವೈಫಲ್ಯ ಖಂಡಿಸಿ ಜು. 14 ರಿಂದ ದೇಶವ್ಯಾಪಿ ಪ್ರತಿಭಟನೆ ನಡೆಸಲಾಗುವುದು ಎಂದ ಕಾರಟ್, ಮುಖ್ಯವಾಗಿ ಮಿತಿಮೀರಿದ ಹಣದುಬ್ಬರ ಹಾಗೂ ಅಣು ಒಪ್ಪಂದವನ್ನು ಎಡಪಕ್ಷಗಳು ಯಾಕೆ ವಿರೋಧಿಸುತ್ತವೆ ಎನ್ನುವುದನ್ನ ಜನಸಾಮಾನ್ಯರಿಗೆ ತಿಳಿಸುತ್ತೇವೆ. ಕೇಂದ್ರದ ಯುಪಿಎ ಸರ್ಕಾರ ಅಣು ಒಪ್ಪಂದದ ಪರ ನಿಲುವು ತಳೆದಿರುವುದನ್ನು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದ ನಾಲ್ಕು ಎಡಪಕ್ಷಗಳು ಶುಕ್ರವಾರ ಮಹತ್ವದ ಸಭೆ ನಡೆಸಿದ್ದವು. ಒಪ್ಪಂದ ಕಗ್ಗಂಟಾಗಿರುವ ಹಿನ್ನಲೆಯಲ್ಲಿ ಎಡಪಕ್ಷಗಳು ಯುಪಿಎ ಸರ್ಕಾರಕ್ಕೆ ನೀಡಿರುವ ಬೆಂಬಲ ಹಿಂದಕ್ಕೆ ಪಡೆಯಲಿವೆ ಎನ್ನುವ ಸುದ್ದಿ ಕೇಳಿಬಂದಿತ್ತು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications