ಗಣಿ ಹಗರಣದ ಸಮಗ್ರ ತನಿಖೆ ಎಚ್ ಡಿಕೆ ಆಗ್ರಹ
ಬೆಂಗಳೂರು, ಜು. 4 : ಗಣಿ ಲಂಚ ಹಗರಣಕ್ಕೆ ಸಂಬಂಧಿಸಿದಂತೆ ನನ್ನ ಮೇಲೆ ವಿನಾಕಾರಣ ಆರೋಪ ಮಾಡುತ್ತಿರುವ ಬಿಜೆಪಿ ನ್ಯಾಯಯುತವಾದ ತನಿಖೆ ನಡೆಸಿದರೆ ಅದನ್ನು ಎದುರಿಸಲು ಸಿದ್ಧ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಮತ್ತು ಬಿಜೆಪಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಗಣಿ ಲಂಚ ಹಗರಣ ವಿಷಯದಲ್ಲಿ ಸಾಕಷ್ಟು ಗೊಂದಲ ಉಂಟಾಗಿತ್ತು. ಸದನದಲ್ಲಿ ಪ್ರವಾಸೋಧ್ಯಮ ಸಚಿವ ಜನಾರ್ದನರೆಡ್ಡಿ ಅವರು ಗಣಿ ಲಂಚ ಹಗರಣದ ಬಗ್ಗೆ ಸೂಕ್ತ ತನಿಖೆ ಆಗಬೇಕು ಎಂದು ಹೇಳಿದ್ದಾರೆ. ಈ ಹಗರಣಕ್ಕೆ ಸಂಬಂಧಿಸಿದಂತೆ ಸರ್ಕಾರ ತನಿಖೆ ಕೈಗೆತ್ತಿಕೊಂಡಲ್ಲಿ ಎದುರಿಸಲು ತಾವು ಸಿದ್ಧ ಎಂದರು. ಸತ್ಯಾಸತ್ಯತೆಗಳ ಬಹಿರಂಗಕ್ಕೆ ತನಿಖೆಯೇ ಉತ್ತಮ ಮಾರ್ಗವಾಗಿದೆ, ಶೀಘ್ರದಲ್ಲಿ ಸರ್ಕಾರ ಅದಕ್ಕೆ ಮನಸ್ಸು ಮಾಡಲಿ ಎಂದು ಹೇಳಿದರು.
ರಸಗೊಬ್ಬರ ವಿಚಾರದಲ್ಲಿ ಸರ್ಕಾರ ನಡೆದುಕೊಂಡ ರೀತಿ ನಾಚಿಕೆಗೇಡಿನ ಕ್ರಮವಾಗಿದೆ. ಸಾಲ ವಾಪಸಾತಿ ಮಾಡಬೇಕೆಂದು ಕೇಂದ್ರ ಸರ್ಕಾರದ ಮುಂದೆ ಕೈಯೊಡ್ಡುವುದು ಹಾಸ್ಯಾಸ್ಪದವಾಗಿದೆ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications