ಮುಂಗಡಪತ್ರ 08: ಹಿಂದುಳಿದ ಜಿಲ್ಲೆಗಳಿಗೆ ಹಣ
ನವದೆಹಲಿ, ಮಾ.10: ಹಲವು ವರ್ಷಗಳಿಂದ ಧೂಳು ತಿನ್ನುತ್ತಾ ಬಿದ್ದಿದ್ದ ಮಹತ್ವಪೂರ್ಣ ವರದಿಯೊಂದನ್ನು ಕರ್ನಾಟಕ ಸರಕಾರ ಇಂದು ಖೊಡವಿ ಕೈಗೆತ್ತಿಕೊಂಡಿತು. ರಾಜ್ಯದ ಸರ್ವಾಂಗೀಣ, ಸರ್ವತೋಮುಖ ಅಭಿವೃದ್ಧಿಯ ಮಂತ್ರ ಜಪಿಸುವ ಆ ವರದಿಯನ್ನು ಅರ್ಥ ಶಾಸ್ತ್ರಜ್ಞ ಪ್ರೊ. ಡಿ. ಎಂ. ನಂಜುಂಡಪ್ಪ ಬರೆದು ವರ್ಷಗಳೇ ಉರುಳಿದ್ದವು. ರಾಜ್ಯದಲ್ಲಿ ಪ್ರಾದೇಶಿಕ ಅಸಮತೋಲನೆ ನಿವಾರಿಸುವ ಉದ್ದೇಶವೇ ಆ ವರದಿಯ ಜೀವಾಳವಾಗಿತ್ತು.
ಈ ವರದಿಯನ್ನು ಜಾರಿಗೆ ತರದೆ ನಮ್ಮ ಜನಪ್ರಿಯ ಸರಕಾರಗಳು ಓತ್ಲ ಹೊಡೆಯುತ್ತಿದ್ದವು. ಮಂತ್ರಿ ಮಹೋದಯರಿಗೆ ಅನುಕೂಲವಾಗುವ, ತಮ್ಮ ತಮ್ಮ ಕ್ಷೇತ್ರಗಳನ್ನು ಬೆಚ್ಚಗಾಗಿಸುವ ಅಭಿವೃದ್ಧಿ ಮಂತ್ರಗಳನ್ನು ಮಾತ್ರ ರಾಜಕಾರಣಿಗಳು ಜಪಿಸಿಕೊಂಡು ಬರುತ್ತಿದ್ದರು. ಆದರೆ, ಜನಪ್ರಿಯ ಸರಕಾರದ ಗೈರು ಹಾಜರಿಯ ಈ ಹೊತ್ತಿನಲ್ಲಿ, ರಾಷ್ಟ್ರಪತಿ ಆಳ್ವಿಕೆ ಪರ್ವದಲ್ಲಿ, ನಂಜುಂಡಪ್ಪ ಅವರ ವರದಿಗೆ ಪಿ. ಚಿದಂಬರಂ ಲೋಕಸಭೆಯಲ್ಲಿ ಮುಕ್ತಿ ದೊರಕಿಸಿದರು.
ನಂಜುಂಡಪ್ಪ ವರದಿಯನ್ನು ಕಾರ್ಯರೂಪಕ್ಕೆ ತರುವ ಮಹತ್ವಾಕಾಂಕ್ಷೆಯ ಮುಂಗಡಪತ್ರವನ್ನು ಇಂದು ಲೋಕಸಭೆಯಲ್ಲಿ ಮಂಡಿಸಲಾಯಿತು. ಒಂದು ಜಿಲ್ಲೆಗೆ ಬೆಣ್ಣೆ, ಒಂದು ಜಿಲ್ಲೆಗೆ ಸುಣ್ಣ ಎಂಬ ನೀತಿಯನ್ನು ಹೊಡೆದುಹಾಕಿ ಅಭಿವೃದ್ಧಿ ಪಥದಲ್ಲಿ ನೂತನ ಇತಿಹಾಸ ಬರೆಯುವ ಬಜೆಟ್ಟಿಗೆ ಕೇಂದ್ರ ಅರ್ಥ ಸಚಿವ ಪಿ. ಚಿದಂಬರಂ ಮುನ್ನುಡಿ ಬರೆದರು. ಬೆಳವಣಿಗೆ, ಅನುದಾನ, ಮೂಲಭೂತ ಸೌಕರ್ಯಗಳನ್ನು ಕಾಣದೆ ಬೆಂಗಾಡಾಗಿದ್ದ , ವಿಶೇಷವಾಗಿ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಇಂದು ಮಂಡಿಸಲಾದ ಮುಂಗಡ ಪತ್ರ ಓಯಸಿಸ್ ಎನಿಸಿತು. ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಬಜೆಟ್ಟಿನಲ್ಲಿ 2459 ಕೋಟಿ ರೂಪಾಯಿ ಸಿಕ್ಕಿತು. ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಒತ್ತುಕೊಡುವುದಲ್ಲದೆ, ಕೃಷಿ,ನೀರಾವರಿ ಹಾಗೂ ಶಿಕ್ಷಣ ಕ್ಷೇತ್ರಗಳಿಗೆ ಈ ಮುಂಗಡ ಪತ್ರ ಆದ್ಯತೆ ನೀಡಿದೆ.
ಮುಖ್ಯಾಂಶಗಳು ಹೀಗಿವೆ:
*ಒಟ್ಟು ಬಜೆಟ್ ಯೋಜನಾ ಗಾತ್ರ 21759 ಕೋಟಿ ರೂ.
*ಕೇಂದ್ರದ ಪಾಲು 2058.04 ಕೋಟಿ ರೂ.
*ರಾಜ್ಯದ ಪಾಲು 19693 ಕೋಟಿ ರೂ.
*114 ಹಿಂದುಳಿದ ತಾಲೂಕುಗಳ ಅಭಿವೃದ್ಧಿ ಕಾರ್ಯ.
*ನಂಜುಂಡಪ್ಪ ವರದಿ ಅನುಷ್ಠಾನಕ್ಕೆ 2459 ಕೋಟಿ ರೂ.
*ನೀರಾವರಿ,ಕೃಷಿ, ಶಿಕ್ಷಣಕ್ಕೆ ಆದ್ಯತೆ.
*ಐಟಿ ವಲಯಕ್ಕೆ 3595 ಕೋಟಿ ರೂ.
*ಕಳೆದ ಸಾಲಿಗಿಂತ ಈ ಬಾರಿಯ ಬಜೆಟ್‍ನಲ್ಲಿ 880 ಕೋಟಿ ರೂ. ಹೆಚ್ಚಳ.
*ಕಳೆದ ಸಾಲಿಗಿಂತ 1778 ಕೋಟಿ ರೂ. ಯೋಜನಾ ಗಾತ್ರ ಹೆಚ್ಚಳ.
*ರಾಜ್ಯದ ತೆರಿಗೆ ರಹಿತ ಆದಾಯ 1931 ಕೋಟಿ ರೂ.
*ಅಭಿವೃದ್ದಿ ಕಾರ್ಯಗಳಿಗೆ ಅನುದಾನ ಹೆಚ್ಚಳ.
(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications