ರಾಜ್ಯ ಮತದಾರರ ಅಂತಿಮ ಪಟ್ಟಿ ಬಹುತೇಕ ಸಿದ್ಧ
ಬೆಂಗಳೂರು, ಮಾ.10: ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ಎಲ್ಲಾ ನಗರ ಪಾಲಿಕೆ ಹಾಗೂ ತುಮಕೂರು ನಗರ ಹೊರತುಪಡಿಸಿ ಉಳಿದ ಎಲ್ಲಾ ಜಿಲ್ಲೆಗಳ ಮತದಾರರ ಪಟ್ಟಿ ಸಿದ್ಧವಾಗಿದೆ. ಅಂತಿಮ ಪರಿಷ್ಕೃತ ಪಟ್ಟಿ ಯನ್ನು ಇಂದು ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿದೆ.
ಅಂತಿಮ ಪಟ್ಟಿಯಲ್ಲಿ ಹೆಸರುಗಳು ಬಿಟ್ಟು ಹೋಗಿದ್ದಲ್ಲಿ, ಬದಲಾವಣೆ ಆಗಿದ್ದಲ್ಲಿ, ಹೊಸದಾಗಿ ಸೇರ್ಪಡೆಯಾಗಬೇಕಾದಲ್ಲಿ ಅಂತಹ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಇನ್ನೂ ಅವಧಿ ಇದೆ.ರಾಜ್ಯದ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಬರುವ ಮತದಾರರ ಪರಿಷ್ಕೃತ ಪಟ್ಟಿಯನ್ನು ಮಾ.20ರಂದು ಪ್ರಕಟಿಸಲಾಗುವುದು ಎಂದು ರಾಮಶೇಷನ್ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.
ಮತದಾರರಿಗೆ ಗುರುತಿನ ಚೀಟಿ ನೀಡುವ ಕೆಲಸ ಮಾ. 15ರಿಂದ ಆರಂಭವಾಗಲಿದೆ. ಗುರುತಿನ ಚೀಟಿ ಕಳೆದುಕೊಂಡವರು 25 ರೂ. ಶುಲ್ಕ ಪಾವತಿಸಿ ಹೊಸ ಗುರುತಿನ ಚೀಟಿಯನ್ನು ಪಡೆಯಬಹುದು. ಉಳಿದಂತೆ ಹೊಸ ಮತದಾರರಿಗೆ ಹಾಗೂ ಗುರುತಿನ ಚೀಟಿಯಲ್ಲಿ ದೋಷ ಕಂಡುಬಂದಲ್ಲಿ ಉಚಿತ ಗುರುತಿನ ಚೀಟಿ ನೀಡುವುದಾಗಿ ರಾಮಶೇಷನ್ ತಿಳಿಸಿದರು.
ರಾಜ್ಯದ ಅಂತಿಮ ಮತದಾರರ ಪಟ್ಟಿ ಹಾಗೂ ಚುನಾವಣಾ ಕ್ಷೇತ್ರ ಮರು ವಿಂಗಡಣೆಯ ಕಾರ್ಯಗಳ ಬಗ್ಗೆ ಪರಿಶೀಲಿಸಲು ಕೇಂದ್ರ ಚುನಾವಣಾ ಆಯೋಗದ ಉಪ ಆಯುಕ್ತ ಜಯಪ್ರಿಯ ಪ್ರಕಾಶ್ ಮಂಗಳವಾರ ರಾಜ್ಯಕ್ಕೆ ಆಗಮಿಸಲಿದ್ದಾರೆ. ಅವರು ರಾಜ್ಯದಲ್ಲಿ ಮೂರು ದಿನಗಳ ಕಾಲ ಮೊಕ್ಕಾಂ ಹೂಡಿ ಚುನಾವಣಾ ಪೂರ್ವ ಸಿದ್ಧತೆ ಕುರಿತು ವೀಕ್ಷಣೆ ನಡೆಸಲಿದ್ದಾರೆಂದು ರಾಮಶೇಷನ್ ತಿಳಿಸಿದರು.
(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications