ದುರ್ಬಲ ಕಾಂಗ್ರೆಸ್ ಕೈಹಿಡಿದೆತ್ತಲು ಕೃಷ್ಣನಾಗಮನ
ಮಾಜಿ ಮುಖ್ಯಮಂತ್ರಿ ಮತ್ತು ಕೆಲವೇ ಗಂಟೆಗಳಲ್ಲಿ ಮಾಜಿ ರಾಜ್ಯಪಾಲ ಎನಿಸಿಕೊಳ್ಳಲಿರುವ ಎಸ್. ಎಂ. ಕೃಷ್ಣ ಅವರ ಮತ್ತೊಂದು ರಾಜಕೀಯ ಇನ್ನಿಂಗ್ಸ್ ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಕರ್ನಾಟಕ ಕಾಂಗ್ರೆಸ್ಸಿನ ಚುಕ್ಕಾಣಿ ಹಿಡಿಯುವುದರ ಬಗೆಗೆ ಅವರು ಏನೂ ಹೇಳಿಲ್ಲವಾದರೂ, ಸೋನಿಯಾ ಗಾಂಧೀ ಆದೇಶ ಕೊಟ್ಟ ಮೇಲೆ ಅವರು ಗಂಟೂಮೂಟೆ ಕಟ್ಟಿಕೊಂಡು, ಪ್ರೇಮಾ ಅವರನ್ನು ಕರೆದುಕೊಂಡು ಬೆಂಗಳೂರಿಗೆ ವಾಪಸ್ಸಾಗಲೇಬೇಕು. ರಾಜ್ಯ ಕಾಂಗ್ರೆಸ್ಸಿನ ಹಿತಾಸಕ್ತಿ ಉದ್ದೇಶವಿಲ್ಲದೆ ಅವರೇಕೆ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ಕೊಡುತ್ತಾರೆ?
ಕೃಷ್ಣ ಅವರು ಕರ್ನಾಟಕಕ್ಕೆ ಮರಳುತ್ತಿರುವ ಸುದ್ದಿ ಕೆಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕಾಂಗ್ರೆಸ್ಸಿನಲ್ಲಿ ನಾಯಕರ ದೊಡ್ಡ ಹಿಂಡೇ ಇದೆ. ಆದರೆ, ಸಾರ್ವತ್ರಿಕ ಚುನಾವಣೆಗಳಲ್ಲಿ ಪಕ್ಷವನ್ನು ಮುನ್ನಡೆಸುವ ಒಬ್ಬ ಧೀರ ಅಥವಾ ಧೀರೆ ಇಲ್ಲ. ಕೃಷ್ಣ ಅವರನ್ನು ರಾಜ್ಯಕ್ಕೆ ಕರೆಯಿಸಿಕೊಳ್ಳಲು ಇದು ಮುಖ್ಯ ಕಾರಣ. ಧರಂಸಿಂಗ್ ಚುನಾವಣೆ ನಡೆದ ನಂತರ ಮೂಡಿಬರುವ ನಾಯಕ. ವಲಸೆ ಬಂದಿರುವ ಸಿದ್ದು ಇನ್ನೂ ಪಕ್ಷದ ಚುನಾವಣಾ ಸರ್ಕಸ್ಸಿನಲ್ಲಿ ಧೀರೋದಾತ್ತ ಪ್ರರ್ದಶನ ನೀಡುವುದು ಬಾಕಿ ಇದೆ. ಇನ್ನು ಖರ್ಗೆ ಒಬ್ಬ ನಾಯಕರೇ ಅಲ್ಲ ಎಂದು ಹೇಳುವವರು ಅವರ ಪಕ್ಷದಲ್ಲೇ ಇದ್ದಾರೆ. ಖರ್ಗೆ ಅವರಲ್ಲಿ ಸಮೂಹ ನಾಯಕತ್ವದ ಗುಣಲಕ್ಷಣಗಳು ಸೊನ್ನೆ.
ಅಂದಮೇಲೆ ಕೃಷ್ಣ ಬಿಟ್ಟರೆ ಅನ್ಯಮಾರ್ಗವಿಲ್ಲ ಎಂಬ ಕಠೋರ ಸತ್ಯವನ್ನು ಹೈಕಮಾಂಡ್ ಅರಿತಿದೆ. ಇದೇ ವೇಳೆ, ಚುನಾವಣಾ ಆಯೋಗದ ಅತಿರಥ ಮಹಾರಥರು ಸದ್ಯ ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದಾರೆ. ಮತದಾರರ ಪಟ್ಟಿ ಸಿದ್ಧವಾಗುತ್ತಿದೆ. ವಿವಿಧ ಪಕ್ಷದ ನಾಯಕರು, ಜಿಲ್ಲಾಧಿಕಾರಿಗಳು ಹಾಗೂ ಚುನಾವಣಾ ಯಂತ್ರವನ್ನು ಚಲಿಸುವ ಎಲ್ಲ ಅಂಗಗಳೊಂದಿಗೆ ಚುನಾವಣಾ ಆಯೋಗದ ಮುಖ್ಯಸ್ಥರು ಮಾತುಕತೆ ನಡೆಸುತ್ತಿದ್ದಾರೆ. ಯಾವ ಕ್ಷಣದಲ್ಲಾದರೂ ವಿಧಾನಸಬಾ ಚುನಾವಣೆಯ ದಿನಾಂಕ ಹೊರಬೀಳುವ ಸಂಕೇತಗಳು ಕಾಣಿಸುತ್ತಿವೆ. ಈ ಸಮಯಕ್ಕೆ ಸರಿಯಾಗಿ ಕೃಷ್ಣ ಅವರು ಕರ್ನಾಟಕಕ್ಕೆ ಮರಳುತ್ತಿದ್ದಾರೆ. ಈ ಬೆಳವಣಿಗೆಯಿಂದ ಖುಷಿಯಾಗಿರುವ ವ್ಯಕ್ತಿಗಳ ಸಾಲಿನಲ್ಲಿ ಮೊದಲು ಕಾಣಿಸುವವರು ಡಿಕೆ ಶಿವಕುಮಾರ್.
ಮುಖ್ಯಮಂತ್ರಿಯಾಗಿ ಐದು ವರ್ಷಗಳನ್ನು ಪೂರೈಸಿದ ಹೆಮ್ಮೆ ಮತ್ತು 2004ರಲ್ಲಿ ಸಾಕಷ್ಟು ಸಂಖ್ಯಾಬಲವನ್ನು ಪಕ್ಷಕ್ಕೆ ತಂದುಕೊಡಲಾಗದ ವೈಫಲ್ಯ ಕೃಷ್ಣ ಅವರ ಹೆಗಲ ಮೇಲಿದೆ. ರಾಜಕೀಯ ವರ್ಚಸ್ಸು ಮತ್ತು ಮುತ್ಸದ್ದಿತನ ಅವರನ್ನು ಪ್ರಬಲ ನಾಯಕನನ್ನಾಗಿ ರೂಪಿಸಿದ್ದರೆ, ಕೇವಲ ನಗರ ಪ್ರದೇಶದ ಅಭಿವೃದ್ಧಿ, ಐಟಿಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಎಂದುಕೊಂಡು ಹಳ್ಳಿಗರ ಕಷ್ಟಗಳನ್ನು ಮೈಗಂಟಿಸಿಕೊಳ್ಳುವುದಿಲ್ಲ ಎಂದು ದೂರುವವರೂ ಸಾಕಷ್ಟಿದ್ದಾರೆ. ವಚನ ಭ್ರಷ್ಟ ಸರಕಾರ ಎಂಬ ಹಣೆಪಟ್ಟಿ ಅಂಟಿಸಿಕೊಂಡಿರುವ ಕುಮಾರಸ್ವಾಮಿ ಅವರ ರಾಜಕೀಯ ದೌರ್ಬಲ್ಯಗಳ ಲಾಭವನ್ನು ಭಾರತೀಯ ಜನತಾಪಕ್ಷ ತನ್ನದಾಗಿಕೊಳ್ಳದಂತೆ ಕೃಷ್ಣ ಏನು ಚಮತ್ಕಾರ ಮಾಡುತ್ತಾರೆ ಎನ್ನುವುದು ಕಾಂಗ್ರೆಸ್ಸಿಗರ ಪ್ರಶ್ನೆ ಮತ್ತು ವೈಯಕ್ತಿಕವಾಗಿ ಕೃಷ್ಣ ಅವರ ಮುಂದಿರುವ ಸವಾಲು.












Click it and Unblock the Notifications