ಮಹಾರಾಷ್ಟ್ರಕ್ಕೆ ಕೃಷ್ಣ ಗುಡ್ ಬೈ,ಕರ್ನಾಟಕ್ಕೆ ಸೈ !
ಮುಂಬೈ, ಮಾ.5: ಮಹಾರಾಷ್ಟ್ರ ರಾಜ್ಯಪಾಲ ಎಸ್.ಎಂ.ಕೃಷ್ಣ ತಮ್ಮ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದಾರೆಂಬ ಸುದ್ದಿ ದಟ್ಟವಾಗಿದೆ. ರಾಜ್ಯಪಾಲ ಹುದ್ದೆಗೆ ಗುಡ್ ಬೈ ಹೇಳಿ ಸಕ್ರಿಯ ರಾಜಕೀಯಕ್ಕೆ ಅವರು ಮರಳುವ ಬಹುದಿನಗಳ ಗಾಳಿಸುದ್ದಿಗೆ ಇವತ್ತು ಇನ್ನಷ್ಟು ರೆಕ್ಕೆಪುಕ್ಕ ಬಂದಿದೆ. ಈ ಹಠಾತ್ ಬೆಳವಣಿಗೆ ರಾಜ್ಯ ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಲಿದೆ. ಕೃಷ್ಣ ಅವರು ಇಂದು ರಾತ್ರಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಗೆ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಕೃಷ್ಣ ಕರ್ನಾಟಕ ರಾಜಕೀಯಕ್ಕೆ ಮರಳಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಈಗಾಗಲೇ ಹಸಿರು ನಿಶಾನೆ ತೋರಿಸಿ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿ ಎಂದು ಕೃಷ್ಣ ಅವರಿಗೆ ಸೂಚಿಸಿದ್ದಾರೆ . 2004ರ ವಿಧಾನಸಭೆ ಚುನಾವಣೆ ನಂತರ ಕೃಷ್ಣ ಸಕ್ರಿಯ ರಾಜಕೀಯದಿಂದ ದೂರ ಉಳಿದಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿ(ಎಸ್) ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ತರಲು ಹಾಗೂ ಬಿಜೆಪಿ ಪ್ರಾಬಲ್ಯವನ್ನು ಕಡಿಮೆ ಮಾಡುವಲ್ಲಿ ಎಸ್.ಎಂ.ಕೃಷ್ಣ ಪ್ರಮುಖ ಪಾತ್ರ ವಹಿಸಿದ್ದರು.
ರಾಜಕೀಯ ವಿಶ್ಲೇಷಕರ ಪ್ರಕಾರ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಪುನಶ್ಚೇತನಗೊಳಿಸಲು ಹಾಗೂ ಜೆಡಿ(ಎಸ್) ಪಕ್ಷವನ್ನು ಚುನಾವಣೆಗಳಲ್ಲಿ ಹಿಂದಿಕ್ಕಲು ಸಕ್ರಿಯ ರಾಜಕಾರಣಕ್ಕೆ ಎಸ್.ಎಂ. ಕೃಷ್ಣ ಅವರ ಆಗಮನ ಅನಿವಾರ್ಯವಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಕೈಹಿಡಿದು ನಡೆಸಲು ಸಮರ್ಥ ಮತ್ತು ಜನಪ್ರಿಯ ನಾಯಕನ ಅವಶ್ಯಕತೆ ಇದೆ. ಆ ಕೊರತೆಯನ್ನು ಕೃಷ್ಣ ತುಂಬುವುರೆಂಬ ವಿಶ್ವಾಸ ಸೋನಿಯಾಗಾಂಧಿ ಅವರಿಗಿದೆ.
ಕೃಷ್ಣ ಅವರು ಪುನಃ ಕಾಂಗ್ರೆಸ್‌ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆಯಾಗಲಿದ್ದಾರೆಯೇ ಅಥವಾ ರಾಜ್ಯ ರಾಜಕಾರಣದಲ್ಲಿ ಅವರ ಪಾತ್ರ ಏನು ಎಂಬ ಬಗ್ಗೆ ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಒಟ್ಟಾರೆಯಾಗಿ ಕೃಷ್ಣ ಅವರ ಮರು ಆಗಮನದಿಂದ ರಾಜ್ಯ ರಾಜಕೀಯದ ಮೇಲೂ ಅದರ ಪರಿಣಾಮ ಉಂಟಾಗಲಿದೆ. ಇವತ್ತು ಕೃಷ್ಣ ದೆಹಲಿಯಲ್ಲಿ ಮೊಕ್ಕಾಂ ಮಾಡಿದ್ದಾರೆ.
(ಏಜೆನ್ಸೀಸ್)












Click it and Unblock the Notifications