ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೇತ್ರದಾನಿಗಳ ತಂಡಕ್ಕೆ ಅನಿಲ್ ಕುಂಬ್ಳೆ ಸೇರ್ಪಡೆ

By Staff
|
Google Oneindia Kannada News

Anil Kumbleಬೆಂಗಳೂರು, ಮಾ. 05 : ನೇತ್ರದಾನ ಶ್ರೇಷ್ಠದಾನ ಎಂದು ನಂಬಿದ ಭಾರತೀಯರ ತಂಡಕ್ಕೆ ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಅನಿಲ್ ಕುಂಬ್ಳೆ ಸ್ಥಾನ ಪಡೆದಿದ್ದಾರೆ. ಕಳೆದ ಭಾನುವಾರ ತಮ್ಮ ಕಣ್ಣುಗಳನ್ನು ದಾನಕ್ಕೆ ಮುಡಿಪಾಗಿಡುವ ಪತ್ರಕ್ಕೆ ಅವರು ಸಹಿ ಹಾಕಿ ಇತರರಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ನೀವು ಇನ್ನೂ ಕಣ್ಣು ದಾನ ಮಾಡಿಲ್ಲವಾ?

ಭಾರತ ದೇಶದಲ್ಲಿ ಸಂಪೂರ್ಣ ದೃಷ್ಟಿ ಹೀನತೆಗೆ ತುತ್ತಾಗಿರುವವರ ಸಂಖ್ಯೆ 13 ದಶಲಕ್ಷ. ಕಣ್ಣರಳಿಸಿ ಅತ್ತಿತ್ತ ಗಮನಿಸಿದರೆ ನಿಮಗೆ ಒಬ್ಬ ಕುರುಡ ಅಥವಾ ಕುರುಡಿ ಕಣ್ಣಿಗೆ ಬಿದ್ದಾರು. ಇಂಥ ದೇಶಬಾಂಧವರ ನೆರವಿಗಾಗಿ ಕಣ್ಣು ದಾನ ಮಾಡಿ ಎನ್ನುತ್ತದೆ ನಮ್ಮ ಸಮಾಜ. ಕುಂಬ್ಳೆ ಕೂಡ ಇದೇ ಮಾತುಗಳನ್ನು ಹೇಳಿದ್ದಾರೆ. ನೇತ್ರದಾನದ ವಿಷಯದಲ್ಲಿ ಮಾಧ್ಯಮಗಳು ಹೆಚ್ಚು ಉತ್ಸಾಹದಿಂದ ಪ್ರಚಾರ ಕೊಡಬೇಕು, ಅರಿವು ಮೂಡಿಸಬೇಕು ಎಂದು ಕರೆ ಕೊಟ್ಟಿದ್ದಾರೆ.

ಕಳೆದ ಭಾನುವಾರ ಅಪರಾತ್ರಿಯಲ್ಲಿ ಕಳ್ಳರನ್ನು ಹಿಡಿಯಲು ಹೋದ ಒಬ್ಬ ಪೇದೆ ಕಳ್ಳರಿಂದಲೇ ಕೊಲೆಯಾದ. ಈ ಘಟನೆ ನಡೆದದ್ದು ಬೆಂಗಳೂರಿನ ಜೆ.ಪಿ. ನಗರದಲ್ಲಿ. ಕೇವಲ ಎಂಟೇ ತಿಂಗಳ ಹಿಂದೆ ಮದುವೆಯಾಗಿದ್ದ 29ರ ಹರೆಯದ ಪೇದೆ ನಾಗೇಶ್ ಕಾರನ್ನು ಕದಿಯಲು ಬಂದ ಕಳ್ಳರನ್ನು ಹಿಡಿಯಲು ಹೋಗಿ ಪರಾರಿಯಾಗುತ್ತಿದ್ದ ಕಳ್ಳರ ಕಾರಿಗೆ ಸಿಕ್ಕು ಸತ್ತಿದ್ದಾರೆ. ಅವರ ಹೆಂಡತಿ ಶೋಭ ನಾಲ್ಕು ತಿಂಗಳ ಗರ್ಭಿಣಿ. ಕಾರ್ಯನಿರ್ವಹಿಸುತ್ತಿದ್ದಾಗಲೇ ಮೃತರಾದ ಪೇದೆ ನಾಗೇಶ್ ಅವರು ಈ ಲೋಕದಿಂದ ಕಣ್ಮರೆಯಾಗಿದ್ದರೂ ಅವರ ಕಣ್ಣುಗಳು ಜೀವಂತವಾಗಿವೆ. ಅವರ ಕಣ್ಣುಗಳನ್ನು ಸಂರಕ್ಷಿಸಿಡಲಾಗಿದ್ದು ಕಣ್ಣಿಲ್ಲದವರಿಗೆ ಬೆಳಕಾಗಿ ನಾಗೇಶ್ ಎಂದೆಂದಿಗೂ ಜೀವಂತವಾಗಿರುತ್ತಾರೆ.

ಜೀವಂತವಾಗಿರುವಾಗಲೇ ಕಣ್ಣುದಾನ ಮಾಡುವ ಇಂಗಿತದ ದಾಖಲೆಗೆ ಸಹಿ ಹಾಕಿದ್ದರೆ ಯಾರ ಕಣ್ಣುಗಳನ್ನು ಬೇಕಾದರೂ ದಾನವಾಗಿ ಪಡೆಯಬಹುದಾಗಿದೆ. ಒಬ್ಬ ಶ್ರೀಸಾಮಾನ್ಯನಾಗಲಿ ಅಥವ ಎಲೈಟ್ ಗುಂಪಿನಲ್ಲಿರುವ ವ್ಯಕ್ತಿಯೇ ಆಗಲಿ ಕಣ್ಣು ದಾನದ ಮುಖಾಂತರ ಕಣ್ಣಿಲ್ಲದವರ ಬಾಳಿನ ಬೆಳಕಾಗಿ ನೇತ್ರದಾನಿಗಳ ಗುಂಪಿನ ಸದಸ್ಯರಾಗಲು ಸಾಧ್ಯ. ನೀವೂ ಒಂದು ಬಾರಿ ಯೋಚಿಸಿ. ಸಾಧ್ಯವಾದರೆ ಕಣ್ಣು ದಾನದ ಪತ್ರವನ್ನು ಈಗಲೇ ಬರೆದಿಡಿ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X