ವಿಪ್ರೊ: 3ನೇ ತ್ರೈಮಾಸಿಕದ ಲಾಭ 804.1ಕೋಟಿ ರೂ.
ಬೆಂಗಳೂರು, ಜ.18: ದೇಶದ ಮೂರನೆ ಅತಿ ದೊಡ್ಡ ಸಾಪ್ಟ್‌ವೇರ್ ಕಂಪನಿ ವಿಪ್ರೊ ಸಂಸ್ಥೆ ತನ್ನ ಮೂರನೆ ತ್ರೈಮಾಸಿಕ ಫಲಿತಾಂಶಗಳನ್ನು ಪ್ರಕಟಿಸಿದೆ. ಡಿ.31, 2007ಕ್ಕೆ ಅದರ ನಿವ್ವಳ ಲಾಭ 804.10 ಕೋಟಿ ರೂ.ಗಳು. ಹಿಂದಿನ ತ್ರೈಮಾಸಿಕದಲ್ಲಿ 760.30 ಕೋಟಿ ರೂ. ಲಾಭಗಳಿಸಿತ್ತು. ಈ ತ್ರೈಮಾಸಿಕದಲ್ಲಿ ಶೇ. 5.7ರಷ್ಟು ವೃದ್ಧಿ ಸಾಧಿಸಿದೆ.
ಕಳೆದ ಸಾಲಿನಲ್ಲಿ ಸಂಸ್ಥೆಯ ನಿವ್ವಳ ಮಾರಾಟ 4,357 ಕೋಟಿ ರೂ.ಗಳು. ಕಳೆದ ಜುಲೈ-ಸೆಪ್ಟಂಬರ್ ತ್ರೈಮಾಸಿಕಕ್ಕೆ ಹೋಲಿಸಿದರೆ ಈ ಬಾರಿ ಶೇ.4.98ರಷ್ಟು ಅಧಿಕ ಉತ್ಪನ್ನಗಳನ್ನು ವಿಪ್ರೊ ಮಾರಾಟ ಮಾಡಿದೆ. ಡಿ.31, 2007ರ ಕೊನೆಗೆ ಕಂಪನಿಯ ಒಟ್ಟಾರೆ ಆದಾಯ 854 ಕೋಟಿ ರೂ.ಗಳು. ಅದೇ ಕಳೆದ ತ್ರೈಮಾಸಿಕದಲ್ಲಿ ಒಟ್ಟು 814 ಕೋಟಿ ರೂ. ಲಾಭಗಳಿಸಿತ್ತು.
ಜಾಗತಿಕ ಐಟಿ ಸೇವೆಗಳು ಮತ್ತು ಉತ್ಪನ್ನಗಳಿಂದ 3,616 ಕೋಟಿ ರೂ.ಗಳಷ್ಟು ವಾರ್ಷಿಕ ವರಮಾನ ಗಳಿಸಿ ಶೇ. 26ರಷ್ಟು ಲಾಭಗಳಿಸಿದೆ. ಮೂರನೆ ತ್ರೈಮಾಸಿಕದಲ್ಲಿ ಜಾಗತಿಕ ಐಟಿ ಸೇವೆಗಳು ಮತ್ತು ಉತ್ಪನ್ನಗಳಿಗೆ ಹೊಸ 39 ಗ್ರಾಹಕರು ಸೇರ್ಪಡೆಯಾಗಿದ್ದು, ಕಂಪನಿಯ ಗ್ರಾಹಕ ಮತ್ತು ವಿದ್ಯುತ್ ಉತ್ಪನ್ನಗಳು ಶೇ.107ರಷ್ಟು ಹೆಚ್ಚಿಗೆ ಮಾರಾಟವಾಗಿದ್ದು ಕಂಪನಿ ಲಾಭದ ದಿಸೆಯಲ್ಲಿ ಮುನ್ನುಗ್ಗಲು ಕಾರಣವಾಯಿತು.
ಭಾರತ, ಮಧ್ಯಪ್ರಾಚ್ಯ ಮತ್ತು ಏಷ್ಯಾಗಳಲ್ಲಿ ನಮ್ಮ ಕಂಪನಿಗೆ ಟೆಲಿಕಾಂ ಕ್ಷೇತ್ರದಲ್ಲಿ ಹೆಚ್ಚಿನ ಹೊರಗುತ್ತಿಗೆ ಸಿಕ್ಕಕಾರಣ ಭಾರತೀಯ ಮಾರುಕಟ್ಟೆಯಲ್ಲಿ ನಮಗೆ ಹೆಚ್ಚಿನ ಲಾಭ ಪಡೆಯಲು ಸಾದ್ಯವಾಯಿತು. ಮುಂದಿನ ತ್ರೈಮಾಸಿಕದಲ್ಲಿ 955 ದಶಲಕ್ಷ ಡಾಲರ್ ವರಮಾನ ಗಳಿಸುವ ಗುರಿಯನ್ನು ಹೊಂದಿದ್ದೇವೆ ಎಂದು ವಿಪ್ರೊ ಸಂಸ್ಥೆಯ ಅಧ್ಯಕ್ಷರಾದ ಅಜೀಂ ಪ್ರೇಮ್‌ಜಿ ತಿಳಿಸಿದ್ದಾರೆ. ಗುರುವಾರದ ಮುಂಬೈ ಷೇರುಪೇಟೆಯಲ್ಲಿ ಕಂಪನಿಯ ಷೇರುಗಳು ಶೇ.0.87ರಷ್ಟು ಏರಿಕೆ ಕಂಡು 460.45 ರೂ.ಗಳ ಬಳಿ ನಿಂತಿದೆ.
(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications