ಪರ್ಯಾಯ ವಿವಾದ: ಪುತ್ತಿಗೆ ವಿರುದ್ಧ ತಿರುಗಿಬಿದ್ದ ಐದು ಮಠಗಳು
ಉಡುಪಿ, ಜ.3:ಉಡುಪಿಯ ರಥಬೀದಿಯಿಂದ ದೊರಕಿರುವ ಇತ್ತೀಚಿನ ಸುದ್ದಿಗಳ ಪ್ರಕಾರ ಪುತ್ತಿಗೆ ಶ್ರೀಗಳಿಗೆ ಪರ್ಯಾಯ ಅಧಿಕಾರ ಕೈತಪ್ಪುವ ಸಾಧ್ಯತೆಗಳು ದಟ್ಟವಾಗಿ ಗೋಚರಿಸುತ್ತಿವೆ. ಗುರುವಾರ ಮಧ್ಯಾನ್ಹ ಇಲ್ಲಿ ನಡೆದ ಐವರು ಮಠಾಧೀಶರ ಸಭೆ ಸುಗುಣೇಂದ್ರ ತೀರ್ಥರ ನಿಲುವಿಗೆ ವಿರುದ್ಧವಾದ ನಿರ್ಣಯಕ್ಕೆ ಬಂದಿವೆ. ಪೇಜಾವರ ಕಿರಿಯ ಸ್ವಾಮಿಗಳ ಮುಂದಾಳತ್ವದಲ್ಲಿ ಜರುಗಿದ ಸಭೆಯಲ್ಲಿ ಕಾಣಿಯೂರು, ಸೋದೆ,ಅದಮಾರು, ಕೃಷ್ಣಾಪುರ ಮತ್ತು ಫಲಿಮಾರು ಮಠದ ಸ್ವಾಮಿಗಳು ಭಾಗವಹಿಸಿದ್ದರು.
ಯಾವಕಾರಣಕ್ಕೂ ಶ್ರೀಮಠದ ಪರಂಪರಾಗತ ಸಂಪ್ರದಾಯ ಮುರಿಯಬಾರದು ಎಂಬ ನಿಲುವನ್ನು ಈ ಐವರು ಮಠಾಧೀಶರು ಒಕ್ಕೊರಲಿನಿಂದ ಘೋಷಿಸಿದ್ದಾರೆ. ಸ್ವಲ್ಪ ದಿವಸಗಳ ಹಿಂದೆ ಪುತ್ತಿಗೆ ಶ್ರೀಗಳ ಪರವಾಗಿ ನಿಂತು ಹೇಳಿಕೆ ನೀಡಿದ್ದ ಅದಮಾರು ಸ್ವಾಮಿಗಳು ಕೂಡ ಸುಗುಣೇಂದ್ರರ ಕೃಷ್ಣ ಪೂಜೆ ಹಕ್ಕು ವಿರುದ್ಧವಾಗಿ ನಿಲುವು ತಾಳಿದ್ದಾರೆಂದು ಹೇಳಲಾಗಿದೆ. ಮುಂದೇನು ? ಎನ್ನುವ ಕುತೂಹಲ ಮತ್ತು ಧಾರ್ಮಿಕ ಜಿಜ್ಞಾಸೆ ಮಠದ ಭಕ್ತ ಸಮೂಹಕ್ಕೆ ಎದುರಾಗಿದೆ. ಈ ಸಮಸ್ಯೆ ಬಗೆಹರಿದೀತು ಹೇಗೆ ಎಂದು ಇಡೀ ಉಡುಪಿಯ ಜನಸ್ತೋಮ ಬೆಕ್ಕಸಬೆರಗಾಗಿ ಮಠದ ಕಡೆ ನೋಡುತ್ತಿದೆ.
ಉಡುಪಿ, ಜ.3: ಉಡುಪಿ ಪರ್ಯಾಯ ವಿವಾದ ಸುಗಮವಾಗಿ ಇತ್ಯರ್ಥಗೊಳ್ಳುವ ಲಕ್ಷಣಗಳು ಕಂಡುಬರುತ್ತಿಲ್ಲ. ವಿವಾದ ಪರಿಹರಿಸುವ ವಿಶ್ವಾಸ ಹೊಂದಿದ್ದ ಪೇಜಾವರ ಶ್ರೀಗಳಂಥವರೇ 'ಇನ್ನೇನಿದ್ದರೂ ಶ್ರೀಕೃಷ್ಣನ ಇಚ್ಛೆಯಂತಾಗಲಿ' ಎಂದು ಕೈಚೆಲ್ಲಿ ಕುಳಿತಿದ್ದಾರೆ. ಆದರೆ, ಇನ್ನೊಂದೆಡೆ ಪುತ್ತಿಗೆ ಶ್ರೀಗಳು ಕೃಷ್ಣ ಪೂಜೆ ಮಾಡುವುದು ನಿಶ್ಚಿತ ಎಂದು ಘಂಟಾಘೋಷವಾಗಿ ಸಾರಿದ್ದಾರೆ.
ಸುಗುಣೇಂದ್ರತೀರ್ಥ ಸ್ವಾಮಿಗಳು ಒಂದೊಮ್ಮೆ ತಮಗಿರುವ ಬಹುಮತ ಸಾಬೀತು ಪಡಿಸಿದರೆ ಆಗ ನಾನು ಪರ್ಯಾಯದ ದಿಕ್ಷೆ ಮತ್ತು ಶ್ರೀಕೃಷ್ಣ ಪೂಜೆಗೆ ಅವರಿಗಿರುವ ಹಕ್ಕನ್ನು ಮಾನ್ಯಮಾಡುವುದಾಗಿ ಪೇಜಾವರ ಶ್ರೀಗಳು ಮಂಗಳವಾರ ಉಡುಪಿಯಲ್ಲಿ ಪ್ರಕಟಿಸಿದ್ದಾರೆ. ತಾವು ಮಂಗಳವಾರ ರಾತ್ರಿ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರ ಜತೆ ನಡೆಸಿದ ಮಾತುಕತೆ ಫಲಕಾರಿಯಾಗದಿದ್ದರೂ ತಮ್ಮ ವೈಯಕ್ತಿಕ ಧೋರಣೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅವರು ಸಷ್ಟಪಡಿಸಿದ್ದಾರೆ.
ಪುತ್ತಿಗೆ ಶ್ರೀಗಳು ಅಮೆರಿಕಕ್ಕೆ ತೆರಳುವಾಗಲೇ ಮುಂದಿನ ಸಂದಿಗ್ಧತೆ ಬಗ್ಗೆ ಎಚ್ಚರಿಸಿದ್ದೆವು. ವಾಪಸ್ಸು ಬಂದನಂತರ ಅವರ ಸಾಧನೆಗಾಗಿ ಸನ್ಮಾನವನ್ನೂ ಮಾಡಿದೆವು. 10ವರ್ಷದಿಂದ ಅವರನ್ನು ಶ್ರೀಕೃಷ್ಣ ಪೂಜೆಗೆ ಕರೆದಿಲ್ಲ. ಉಳಿದಂತೆ ಅವರಿಗೆ ಗೌರವ ನೀಡಿದ್ದೇವೆ. ಇದೇ ವೇಳೆ, ಪರ್ಯಾಯ ವಿವಾದಕ್ಕೆ ಸಂಬಂಧಿಸಿದಂತೆ ನಾವು ನ್ಯಾಯಾಲಯಕ್ಕೆ ಹೋಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಶ್ರೀಕೃಷ್ಣನ ಪೂಜೆ ಮಾಡುವ ವಿಚಾರದಲ್ಲಿ ಉಳಿದ ಮಠಾಧೀಶರು ಬಹುಮತ ವ್ಯಕ್ತಪಡಿಸಿದರೆ ಅದಕ್ಕೆ ತಮ್ಮ ಸಮ್ಮತಿ ಇದೆ ಎಂಬ ಪೇಜಾವರ ಶ್ರೀಗಳ ಮಾತನ್ನು ಸುಗುಣೇಂದ್ರ ತೀರ್ಥರು ತಳ್ಳಿಹಾಕಿದ್ದಾರೆ. ಇಲ್ಲಿ ಬಹುಮತ, ಅಲ್ಪಮತ ಎನ್ನುವ ವಿಚಾರವೇ ಇಲ್ಲ. ಶ್ರೀಕೃಷ್ಣ ಪೂಜೆ ನಡೆದೇ ನಡೆಯುತ್ತದೆ ಎಂದು ಪುತ್ತಿಗೆ ಶ್ರೀಗಳು ಪ್ರತಿಕ್ರಿಯಿಸಿದ್ದಾರೆ.
ಪರ್ಯಾಯ ವಿವಾದದಲ್ಲಿ ನನ್ನನ್ನು ಖಳನಾಯಕನಂತೆ ಚಿತ್ರಿಸಲಾಗುತ್ತಿದೆ. ಶ್ರೀಗಳ ಪೂಜೆಗೆ ಅಷ್ಟಮಠಗಳಲ್ಲಿ 6 ಮಠಾಧೀಶರ(ಪೇಜಾವರ, ಕೃಷ್ಣಾಪುರ, ಅದಮಾರು, ಪಲಿಮಾರು, ಕಾಣಿಯೂರು ಮತ್ತು ಸೋದೆ) ವಿರೋಧವಿದೆ. ಇದರಲ್ಲಿ ನಮ್ಮೊಬ್ಬರದೇ ಪಾತ್ರವಿಲ್ಲ. ಸಮಾಜಕ್ಕೆ ಯಾವುದೇ ರೀತಿಯ ಹಾನಿಯಲ್ಲದ ಗರ್ಭಗುಡಿಯ ಶ್ರೀಕೃಷ್ಣನ ಪೂಜೆಗೆ ಸೀಮಿತವಾದ ಸಂಪ್ರದಾಯವನ್ನು ಮಾತ್ರ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಈ ವಿಷಯದಲ್ಲಿ ನಮ್ಮ ಕೈಲಾದುದನ್ನು ಮಾಡಿದ್ದೇವೆ. ಯಾವುದೂ ಫಲಕಾರಿಯಾಗಿಲ್ಲ ಎಂದು ಪೇಜಾವರ ಶ್ರೀಗಳು ವಿಷಾದಿಸಿದರು.
(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications