ಮೈಸೂರಿನಲ್ಲಿ ಮತ್ತೆ ರಾಸಲೀಲೆ : ಪತ್ನಿಯಿಂದಲೇ ಬಹಿರಂಗ!
ಮೈಸೂರು, ಡಿ.21 : ತ್ಯಾಗ ಮತ್ತು ಬಲಿದಾನದ ಸಂಕೇತವಾದ ಪವಿತ್ರ ಬಕ್ರೀದ್ ಹಬ್ಬದ ಸಡಗರ ಎಲ್ಲೆಡೆ ಕಂಡುಬರುವ ಹೊತ್ತಿನಲ್ಲಿ ಪತ್ನಿ ಪೀಡಕ ಮತ್ತು ಸ್ತ್ರೀಲೋಲನೊಬ್ಬನ ರಾಸಲೀಲೆಗಳು ಮೈಸೂರನ್ನು ಅಲ್ಲೋಲಕಲ್ಲೋಲಗೊಳಿಸಿವೆ.
ಶುಕ್ರವಾರ(ಡಿ.21) ಸಂಜೆ ಈ ಪ್ರಕರಣವನ್ನು ಟೀವಿ9 ಬೆಳಕಿಗೆ ತಂದಿದೆ. ಮೈಸೂರಿನ ಸಿಡಿ ಅಂಗಡಿ ಮಾಲೀಕ ನದೀಮ್, ಸುಂದರ ಸ್ತ್ರೀಯರ ಜೊತೆ ರಾಸಲೀಲೆ ನಡೆಸುತ್ತಿದ್ದ. ಕದ್ದು ಮುಚ್ಚಿ ಅಶ್ಲೀಲ ಸಿಡಿಗಳನ್ನು ತಯಾರಿಸುತ್ತಿದ್ದ. ಜೊತೆಗೆ ಮಹಿಳೆಯರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಎಂಬ ಸಂಗತಿಗಳನ್ನು ನದೀಮ್‌ನಿಂದ ಪೀಡನೆಗೊಳಗಾಗಿದ್ದ ಆತನ ಹೆಂಡತಿಯೇ ಬಯಲುಗೊಳಿಸಿದ್ದಾರೆ. ಟೀವಿ ವಾಹಿನಿಗೆ ಅವರು ಮಾಹಿತಿ ನೀಡಿದ್ದಾರೆ.
ನದೀಮ್ ಅನೇಕ ಶ್ರೀಮಂತ ಮನೆತನದ ಹುಡುಗಿಯರನ್ನು ಮಾತ್ರವಲ್ಲ ಗೃಹಿಣಿಯರನ್ನೂ ಬಳಸಿಕೊಂಡಿರುವುದು ಸಿಡಿಯಲ್ಲಿ ಬಹಿರಂಗವಾಗಿದೆ. ಆತ ಆ ಹುಡುಗಿಯರನ್ನು ಸಿಡಿ ತೋರಿಸಿ ಬ್ಲಾಕ್ಮೇಲ್ ಮಾಡುತ್ತಿದ್ದ ಎಂದು ಆತನ ಪತ್ನಿ ತಿಳಿಸಿದ್ದಾರೆ. ಇಂಥ ದುಸ್ಥಿತಿ ಯಾವ ಹುಡುಗಿಯರಿಗೂ ಬಾರದಿರಲಿ ಎಂದು ಅವರು ಅಲವತ್ತುಕೊಂಡಿದ್ದಾರೆ.
ಪತಿಯ ಕುಕೃತ್ಯಗಳಿಂದ ನೊಂದಿರುವ ನದೀಮ್ ಪತ್ನಿ, ನನ್ನ ಗಂಡನಿಂದ ನನಗೆ ಬಿಡುಗಡೆ ಬೇಕು. ಆತನಿಗೆ ಶಿಕ್ಷೆಯಾಗಬೇಕು. ಈ ನಿಟ್ಟಿನಲ್ಲಿ ಸ್ಥಳೀಯ ಪೊಲೀಸರು ಸಹಕರಿಸುತ್ತಿಲ್ಲ. ಪ್ರತಿನಿತ್ಯ ನನ್ನ ಗಂಡ ಕಿರುಕುಳ ನೀಡುತ್ತಿದ್ದಾನೆ. ಸರ್ಕಾರ ನನಗೆ ರಕ್ಷಣೆ ನೀಡಬೇಕು ಎಂದು ನದೀಮ್ ಪತ್ನಿ ಮತ್ತು ಅವಳ ತಾಯಿ ಟಿವಿ ಚಾನಲ್ ಪ್ರಸಾರ ಮಾಡಿದ ನೇರ ಸಂದರ್ಶನದಲ್ಲಿ ಕೋರಿದ್ದಾರೆ. ಮಹಿಳಾ ಸಂಘಟನೆಗಳು 6 ತಿಂಗಳ ಗರ್ಭಿಣಿ ನದೀಮ್ ಪತ್ನಿಯ ಬೆಂಬಲಕ್ಕೆ ನಿಂತಿವೆ. ಇದುವರೆಗೆ ನದೀಮ್ ಎಲ್ಲಿದ್ದಾನೆ, ಅವನ ಪ್ರತಿಕ್ರಿಯೆ ಏನು ತಿಳಿದುಬಂದಿಲ್ಲ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications