ಸಂಘ ಪರಿವಾರದ ದತ್ತ ಜಯಂತಿಗೆ ವಿಧ್ಯುಕ್ತ ಚಾಲನೆ
ಚಿಕ್ಕಮಗಳೂರು, ಡಿ.21:ವಿವಾದಿತ ಇನಾಂದತ್ತಾತ್ರೇಯ ಪೀಠದಲ್ಲಿ ಸಂಘ ಪರಿವಾರದ ದತ್ತ ಜಯಂತಿಗೆ ಇಂದು(ಡಿ.21) ಚಾಲನೆ ದೊರೆತಿದೆ.
ಶ್ರೀ ರಾಮಸೇನೆಯವರು ಶುಕ್ರವಾರ ದತ್ತ ಪೀಠಕ್ಕೆ ಆಗಮಿಸಿ ದತ್ತ ಪಾದುಕೆಗಳ ದರ್ಶನ ಪಡೆದು ಹೋಗಲಿದ್ದಾರೆ.ಸುವಾಸಿನಿಯರು ದತ್ತಪೀಠದಲ್ಲಿ ಅನುಸೂಯಾದೇವಿಗೆ ಪೂಜೆ ಸಲ್ಲಿಸಲಿದ್ದಾರೆ. ಸಂಘ ಪರಿವಾರದ ನೇತೃತ್ವದ ದತ್ತಜಯಂತಿಯ ಶೋಭಾ ಯಾತ್ರೆಯಲ್ಲಿ ಪಾಲ್ಗೊಳ್ಳದಿರಲು ಶ್ರೀರಾಮಸೇನೆಯ ಕಾರ್ಯಕರ್ತರು ನಿರ್ಧರಿಸಿದ್ದಾರೆ.
ಎಲ್ಲೆಲ್ಲೂ ಪೊಲೀಸ್ ಪಡೆ:
ಕಳೆದೆರಡು ದಿನಗಳಿಂದ ಮೋಡ ಕವಿದ ವಾತಾವರಣವಿದ್ದು, ಸೂರ್ಯನ ದರ್ಶನ ಭಾಗ್ಯ ಇನ್ನೂ ಚಿಕ್ಕಮಗಳೂರು ನಗರ ಹಾಗೂ ಬಾಬಾಬುಡನ್ ಗಿರಿ ಆಸುಪಾಸಿನ ಸ್ಥಳದವರಿಗೆ ದೊರೆತಿಲ್ಲ. ಈ ಮಧ್ಯೆ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಎತ್ತ ನೋಡಿದರೂ ಪೊಲೀಸ್ ಗಣಗಳ ದರ್ಶನ ಮಾತ್ರ ಸಾಧ್ಯವಾಗುವಂತೆ ಪೊಲೀಸ್ ತುಕಡಿಗಳನ್ನು ನಿಯೋಜಿಸಲಾಗಿದೆ. ಸುಮಾರು 3100 ಪೋಲಿಸರನ್ನು ನಿಯೋಜಿಸಲಾಗಿದ್ದು, ಇವರಲ್ಲಿ ಇಬ್ಬರು ಎಸ್ಪಿ, 15 ಡಿವೈಎಸ್ಪಿ, 44 ಸಿಪಿಐ, 134ಪಿಎಸ್ ಐ, 170 ಎಎಸ್ ಐ, 634ಎಚ್ ಸಿ,2102 ಪಿಸಿ 13ಡಿಐಆರ್, 2 ಅಗ್ನಿವರ್ಷ, 2ಎ ಎಸ್ ಎಫ್ ತುಕಡಿಗಳಿವೆ.
ಶೋಭಾಯಾತ್ರೆ ಅನುಮಾನ:
ಚಿಕ್ಕಮಗಳೂರು ಜಿಲ್ಲಾಡಳಿತದಿಂದ ಮೌಖಿಕವಾಗಿ ಅನುಮತಿ ಪಡೆದಿರುವ ಬಜರಂಗಿಗಳಿಗೆ ಡಿ. 22 ರಂದು ಶೋಭಾ ಯಾತ್ರೆ ನಡೆಸುವುದು ಕಷ್ಟವಾಗುವ ಸಾಧ್ಯತೆಗಳಿವೆ.ಆದರೆ ಸಂಘ ಪರಿವಾರದವರು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಶಾಂತಿಯುತವಾದ ಮೆರವಣಿಗೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications