ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೀತ ಗಾಳಿ, ಜಿಟಿಜಿಟಿ ಮಳೆಗೆ ಗಡಗಡ ನಡುಗಿದ ಬೆಂಗಳೂರು

By Staff
|
Google Oneindia Kannada News

ಬೆಂಗಳೂರು, ಡಿ.20 : ಸೋಮವಾರ ರಾತ್ರಿಯಿಂದಲೇ ಜಿಟಿಜಿಟಿ ಸುರಿಯುತ್ತಿದ್ದ ಮಳೆ ಮಂಗಳವಾರ ಮತ್ತು ಬುಧವಾರವಿಡೀ ಜಿನುಗಿ, ಇಂದು(ಡಿ.20) ವಿಶ್ರಾಂತಿ ತೆಗೆದುಕೊಂಡಿದೆ. ಸಂಜೆ ಹೇಗೋ ಕಾದು ನೋಡಬೇಕು.

ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ಬೆಂಗಳೂರು ಮಾತ್ರವಲ್ಲ ರಾಜ್ಯದ ದಕ್ಷಿಣ ಭಾಗದಲ್ಲೆಲ್ಲ ಮಳೆರಾಯ ಪ್ರತ್ಯಕ್ಷನಾಗಿದ್ದಾನೆ. ಮೈಸೂರು ಪೂರ್ತಿ ಮಂಗಳವಾರ ತೊಯ್ದು ತೊಪ್ಪೆಯಾಗಿದ್ದರೆ, ಬಂಡೀಪುರದಲ್ಲಿ ಭರ್ತಿ 4 ಸೆಂ.ಮೀ. ಮಳೆ ಬಿದ್ದಿದೆ. ಗುಂಡ್ಲುಪೇಟ್, ಚಾಮರಾಜನಗರದಲ್ಲಿ 2 ಸೆಂ.ಮೀ.ಮಳೆಯಾಗಿದ್ದರೆ, ಮುಳಬಾಗಿಲು, ಆನೇಕಲ್, ಬಂಗಾರಪೇಟೆಯಲ್ಲಿ 1 ಸೆಂ.ಮೀ. ಮಳೆ ದಾಖಲಾಗಿದೆ.

ಅನಿರೀಕ್ಷಿತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಗರದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಅನೇಕ ಭಾಗಗಳಲ್ಲಿ ವಾಹನದಟ್ಟಣೆಯಿಂದಾಗಿ ಸಂಚಾರ ಹದಗೆಟ್ಟಿತ್ತು. ಮಳೆ ನಿಲ್ಲಬಹುದೆಂಬ ಅನಿಸಿಕೆಯಿಂದ ಕೊಡೆ ತರದವರಿಗೆ ಸಾಯಂಕಾಲವೂ ಮಳೆ ಬಿಡದೆ ಜಿನುಗುತ್ತಿದ್ದುದು ಕಿರಿಕಿರಿ ಉಂಟುಮಾಡಿತ್ತು. ಮಳೆಯಲ್ಲಿ ನೆಂದೇ ಹೋಗುತ್ತಿದ್ದುದು ಸಾಮಾನ್ಯ ದೃಶ್ಯವಾಗಿತ್ತು.

ಅಕಾಲಿಕ ಮಳೆ ಮಾತ್ರವಲ್ಲ ಬೀಸುತ್ತಿರುವ ಶೀತಗಾಳಿಯಿಂದಾಗಿ ಬೆಂಗಳೂರಿಗೆ ಬೆಂಗಳೂರೇ ಸ್ವೆಟರು ಹೊದ್ದು ನಡೆದಾಡುತ್ತಿರುವಂತಿದೆ. ಯಾವೋನಾದರೂ ಸ್ವೆಟರೋ ಜರ್ಕಿನ್ನೋ ಇಲ್ಲದೆ ಓಡಾಡುತ್ತಿದ್ದರೆ ಅವನು ಹುಚ್ಚನಿರಬೇಕು ಎಂಬಷ್ಟರ ಮಟ್ಟಿಗೆ ಶೀತಗಾಳಿ ಆವರಿಸಿಕೊಂಡಿದೆ.

ರಾಜ್ಯದ ಉತ್ತರ ಭಾಗದಲ್ಲಿ ಮಳೆ ಇರದಿದ್ದರೂ ವಿಪರೀತ ಚಳಿಯಿಂದಾಗಿ ಜನ ನಡುಗುವಂತಾಗಿದೆ. ರಾಜ್ಯದ ಅತ್ಯಂತ ಕನಿಷ್ಠ ತಾಪಮಾನ 12.2 ಡಿಗ್ರಿ ಸೆಲ್ಷಿಯಸ್ ಬಿಜಾಪುರದಲ್ಲಿ ದಾಖಲಾಗಿದೆ.

ಬೆಂಗಳೂರಿನಲ್ಲಿ ಕಳೆದ 24 ಗಂಟೆಗಳಲ್ಲಿ 19 ಮಿ.ಮೀ. ಮಳೆ ಬಿದ್ದಿದೆ. ಮಳೆ ಕೊಂಚ ವಿರಾಮ ತೆಗೆದುಕೊಂಡಿದ್ದರೂ ಮೂಲೆಯಲ್ಲಿಟ್ಟಿದ್ದ ಛತ್ರಿಯನ್ನು ಜನ ಹೊರತೆಗೆದಿದ್ದಾರೆ. ಕೃಷಿ ವಿಶ್ವವಿದ್ಯಾಲಯ ಹವಾಮಾನ ಇಲಾಖೆ ಇನ್ನೂ ಎರಡು ದಿನ ಮಳೆ ಹುಯ್ಯಬಹುದೆಂದು ತಿಳಿಸಿದೆ.

ತಮಿಳ್ನಾಡಿನಲ್ಲಿ ಭಾರೀ ಮಳೆ : ಚೆನ್ನೈ ಸೇರಿದಂತೆ ತಮಿಳ್ನಾಡಿನ ತಂಜಾವೂರು, ತ್ರಿಚ್ಚಿ ಮುಂತಾದ ಪ್ರದೇಶಗಳಲ್ಲಿ ಬಂಗಾಳಕೊಲ್ಲಿಯಲ್ಲುಂಟಾದ ವಾಯುಭಾರ ಕುಸಿತದಿಂದಾಗಿ ಭಾರೀ ಮಳೆಯಾಗುತ್ತಿದೆ. ಕೆಳೆದ 24 ಗಂಟೆಗಳಲ್ಲಿ ಸುರಿದ ಮಳೆಯಲ್ಲಿ ಕನಿಷ್ಠ 17 ಜನ ಸಾವಿಗೀಡಾಗಿದ್ದಾರೆ. ರಾಜ್ಯದಾದ್ಯಂತ ಇಂದು ರಜೆ ಘೋಷಿಸಲಾಗಿದೆ.

(ಯುಎನ್ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X