ಸೋಮವಾರ ಮುಖ್ಯಮಂತ್ರಿಗೆ ಸತ್ವಪರೀಕ್ಷೆ
ಬೆಂಗಳೂರು, ನ.17 : ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಹಗ್ಗ ಎಳೆಯುವ ಆಟ ಆರಂಭವಾಗಿದೆ. ದೇವೇಗೌಡರ ಷರತ್ತುಗಳಿಗೆ ಅಂಟಿಕೊಂಡಿದ್ದು, ಬಿಜೆಪಿ ಶನಿವಾರ ಸಂಜೆವರೆಗೂ ಕಿಮ್ಮತ್ತಿನ ಬೆಲೆ ನೀಡಿಲ್ಲ. ಕೆಲವು ಷರತ್ತುಗಳನ್ನಷ್ಟೇ ಬಿಜೆಪಿ ಒಪ್ಪಿದೆ ಎನ್ನಲಾಗಿದೆ.
ದೇವೇಗೌಡರು ಷರತ್ತು ಹಾಕಿಲ್ಲ. ಅವು ಕೇವಲ ಸಲಹೆಗಳು. ಅವುಗಳನ್ನು ಬಿಜೆಪಿ ಒಪ್ಪಲೇ ಬೇಕು. ಇಲ್ಲದಿದ್ದರೇ ಅಪಾಯ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಮೆರಾಜುದ್ದೀನ್ ಪಟೇಲ್ ಶನಿವಾರ ಹೇಳಿದ್ದಾರೆ. ಮತ್ತೊಂದು ಕಡೆ ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದಗೌಡ, ಷರತ್ತು ಮತ್ತಿತರ ಯಾವುದೇ ವಿಷಯಗಳಿಂದಲೂ ಸೋಮವಾರ(ನ.19) ನಡೆಯಲಿರುವ ವಿಶ್ವಾಸ ಮತ ಪ್ರಕ್ರಿಯೆಗೆ ತೊಡಕಾಗುವುದಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾನುವಾರ ಜೆಡಿಎಸ್ ಶಾಸಕರ ಸಭೆ ನಡೆಯಲಿದ್ದು, ಎಲ್ಲಾ ಶಾಸಕರು ಗುಪ್ತ ಸ್ಥಳಕ್ಕೆ ತೆರಳಲಿದ್ದಾರೆ. ಸೋಮವಾರ ವಿಧಾನಸೌಧಕ್ಕೆ ನೇರವಾಗಿ ಬರಲಿದ್ದಾರೆ ಎಂದು ಜೆಡಿಎಸ್ ಮೂಲಗಳು ಹೇಳಿವೆ.
***
ಐಬಿಎಂನಲ್ಲಿ ಬಾಂಬ್?
ಬೆಂಗಳೂರು, ನ.17 : ನಗರದ ಐಬಿಎಂ(ಸಾಫ್ಟ್ ವೇರ್ ಕಂಪನಿ) ಕಟ್ಟಡದಲ್ಲಿ ಶನಿವಾರ(ನ,17) ತಲ್ಲಣ. ಮಧ್ಯಾಹ್ನ ಅನಾಮಧೇಯ ವ್ಯಕ್ತಿಯೊಬ್ಬ ಕರೆ ಮಾಡಿ, ಐಬಿಎಂನಲ್ಲಿ ಬಾಂಬ್ ಇದೆ.. ಅದು ಯಾವಾಗ ಬೇಕಾದರೂ ಸ್ಫೋಟಿಸಬಹುದು ಎಂದು ಹೇಳಿದ. ಕೂಡಲೇ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ಪಡೆಯೊಂದಿಗೆ ಆಗಮಿಸಿದ ಪೊಲೀಸರು ತಪಾಸಣೆ ನಡೆಸಿದರು. ಅಂತಿಮವಾಗಿ ಇದೊಂದು ಹುಸಿ ಬಾಂಬ್ ಬೆದರಿಕೆ ಎಂಬುದು ಖಚಿತವಾಯಿತು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications