ಇನ್ಮುಂದೆ ಸರ್ಕಾರಿ ಆಸ್ಪತ್ರೆಗೂ ಮುಷ್ಕರಕ್ಕೂ ದೂರಾದೂರ
ನವದೆಹಲಿ, ನ.14: ಇನ್ನು ಮುಂದೆ ಯಾವುದೇ ಸರಕಾರಿ ಆಸ್ಪತ್ರೆ ಸಿಬ್ಬಂದಿ ಮುಷ್ಕರ ಹೂಡುವಂತಿಲ್ಲ. ಇದು ಸಾರ್ವಜನಿಕ ಹಿತಾಸಕ್ತಿಯನ್ನು ಕಡೆಗಣಿಸಿದಂತೆ ಎಂದು ದೆಹಲಿ ಹೈಕೋರ್ಟ್ ಬುಧವಾರ (ನ.14) ಆಜ್ಞೆ ಹೊರಡಿಸಿದೆ. ಈ ಆಜ್ಞೆ ದೆಹಲಿಯಲ್ಲಿನ ಆಸ್ಪತ್ರೆಗಳಿಗೆ ಅನ್ವಯಿಸುತ್ತದೆ.
ಈ ಹಿಂದಿನ ತೀರ್ಪುಗಳನ್ನು ಪರಿಶೀಲಿಸಿ ಈ ಆಜ್ಞೆಯನ್ನು ಮಾಡಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಿ ಆಸ್ಪತ್ರೆಗಳ ವೈದ್ಯರು ಮುಷ್ಕರ ಹೂಡುವುದು ಕಾನೂನು ಬಾಹಿರ ಎಂದು ವಿಭಾಗೀಯ ಪೀಠದ ನೇತೃತ್ವ ವಹಿಸಿದ್ದ ಮುಖ್ಯ ನ್ಯಾಯಮೂರ್ತಿಗಳಾದ ಎಂ.ಕೆ.ಶರ್ಮಾ ತಿಳಿಸಿದ್ದಾರೆ.
ವೈದ್ಯರು ಮುಷ್ಕರ ಹೂಡುವುದರಿಂದ ಚಿಕಿತ್ಸೆ ಪಡೆಯುತ್ತಿರುವ ರೋಗಿಯ ಪ್ರಾಥಮಿಕ ಹಕ್ಕುಗಳನ್ನು ಕಡೆಗಣಿಸಿದಂತಾಗುತ್ತದೆ. ಈ ಒಂದು ತೀರ್ಪು ಬಡ ರೋಗಿಗಳನ್ನು ಕಡೆಗಣಿಸಿ ಮುಷ್ಕರ ಹೂಡುವ ವೈದ್ಯರಿಗೆ ತಡೆಹಾಕಿದಂತಾಗುತ್ತದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಈ ಸಂಬಂಧ ವಕೀಲರಾದ ಸುಗ್ರೀವ್ ದುಬೆ ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆ ಹೂಡಿದ್ದರು. ಆಸ್ಪತ್ರೆಗಳಲ್ಲಿ ಮುಷ್ಕರ ಹೂಡುವುದನ್ನು ನಿಲ್ಲಿಸಬೇಕು. ಇತ್ತೀಚೆಗೆ ಸರಕಾರಿ ಆಸ್ಪತ್ರೆಯ ವೈದ್ಯರು ಸಣ್ಣಪುಟ್ಟ ವಿಷಯಕ್ಕೆಲ್ಲಾ ಮುಷ್ಕರ ಹೂಡಿ ರೋಗಿಗಳನ್ನು ಹೈರಾಣ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
(ಏಜನ್ಸೀಸ್)












Click it and Unblock the Notifications