ನಗುವುದಕ್ಕೆ ಬೇಕಾದ ರೇಷನ್ ಜಯನಗರದಲ್ಲಿ ಸಿಗಲಿದೆ!?
ಬೆಂಗಳೂರು, ನ.14 : ನಗೋದಕ್ಕೆ ಮನಸ್ಸಿದ್ದರೇ ಸಾಕು, ಅದಕ್ಕೆ ಬೇರೆ ಪದಾರ್ಥಗಳು ಬೇಕಿಲ್ಲ. ರಾಜಧಾನಿ ಕನ್ನಡಿಗರ ನಗಿಸಲು, ನಗೆಗಡಲಲ್ಲಿ ಮುಳುಗಿಸಲು ಅಂತರಂಗ ಹವ್ಯಾಸಿ ರಂಗಸಂಸ್ಥೆ ಮುಂದಾಗಿದೆ.
ವಾರಾಂತ್ಯದಲ್ಲಿ ಅಂದರೆ ನ.17 ಮತ್ತು 18ರಂದು ಎರಡೂ ದಿನ 'ನಗುವಿಗೇಕೆ ರೇಷನ್ 'ಹೆಸರಿನಲ್ಲಿ ಹಾಸ್ಯ ಮೇಳ ನಡೆಯಲಿದೆ. ಜಯನಗರ 7ನೇ ಬ್ಲಾಕ್ ನ ನ್ಯಾಷನಲ್ ಕಾಲೇಜಿನಲ್ಲಿರುವ ಡಾ.ಹೆಚ್.ಎನ್.ಕಲಾಕ್ಷೇತ್ರದಲ್ಲಿ ನಗೆಜಾತ್ರೆಗೆ ಸಿದ್ಧತೆಗಳು ನಡೆದಿವೆ.
ರಂಗಭೂಮಿಯ ದಿವ್ಯ ಚೇತನ ಗುಬ್ಬಿ ವೀರಣ್ಣ ಮತ್ತು ಪತ್ರಿಕಾರಂಗದ ವಂಡರ್ ಕಣ್ಣಿನ ವೈಎನ್ಕೆ ನೆನಪಿಗಾಗಿ ಆಯೋಜಿಸಲಾಗಿರುವ ಹಾಸ್ಯಮೇಳ, ನ.17ರ ಸಂಜೆ 5.30ಕ್ಕೆ ಆರಂಭವಾಗಲಿದೆ. ನ.18(ಭಾನುವಾರ)ರ ಬೆಳಗ್ಗೆ 10ಕ್ಕೆ ನಗೆಗೋಷ್ಠಿಯ ಉದ್ಘಾಟನೆ ನಡೆಯಲಿದೆ. ರಾತ್ರಿ 8ರ ತನಕ ನಗೆ.. ನಗೆ.. ನಗೆ. ಮಾಸ್ಟರ್ ಹಿರಣ್ಣಯ್ಯ, ಸಿ.ಆರ್.ಸಿಂಹ, ಎಂ.ಎಸ್.ನರಸಿಂಹಮೂರ್ತಿ, ಪ್ರೊ.ಕೃಷ್ಣೇಗೌಡ, ಗಂಗಾವತಿ ಪ್ರಾಣೇಶ್, ಕೊಟ್ರೇಶ್ ಕೋಗಳಿ ಸೇರಿದಂತೆ ಮತ್ತಿತರ ನಗೆ ಸಾಮ್ರಾಟರು ನಗಿಸುವ ಜವಾಬ್ದಾರಿ ಹೊತ್ತಿದ್ದಾರೆ.
ಗಾನವಿನೋದಿನಿ ತಂಡದಿಂದ ಕಿರುನಾಟಕಗಳು, ಹಿರಣ್ಣಯ್ಯ ಮಿತ್ರ ಮಂಡಳಿ ವತಿಯಿಂದ ಸದಾರಮೆ ನಾಟಕದ ತುಣುಕುಗಳು ಇಲ್ಲಿ ಪ್ರದರ್ಶನಗೊಳ್ಳಲಿವೆ.
ಬೇಗ ಬನ್ನಿ.. ಬೇಗ ಬಂದವರಿಗಷ್ಟೇ ಇಲ್ಲಿ ಕುರ್ಚಿ! ನಿಂತು ನಗೋದಕ್ಕಿಂತ, ಕೂತು ನಗೋದು ಬಲು ಸೊಗಸು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications