ಚಿಣ್ಣರ ಅಂಗಳದಲ್ಲಿ ಮಕ್ಕಳೊಂದಿಗೆ ಮಗುವಾದ ಸುಧಾರಾಣಿ
ಬೆಂಗಳೂರು, ನ.14: ಇಂದು ಬುಧವಾರ(ನ.14) ಮಕ್ಕಳ ದಿನಾಚರಣೆ. ಅಕ್ಷಯಪಾತ್ರಾ ಪ್ರತಿಷ್ಠಾನವು ಮಕ್ಕಳಿಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸುಧಾರಾಣಿ ಮಕ್ಕಳೊಂದಿಗೆ ನಕ್ಕುನಲಿದರು.
ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುತ್ತಿರುವ ಜಗತ್ತಿನ ಅತಿದೊಡ್ಡ ಸರ್ಕಾರೇತರ ಸಂಸ್ಥೆ ಬೆಂಗಳೂರು ಮೂಲದ ಅಕ್ಷಯ ಪಾತ್ರ ಪ್ರತಿಷ್ಠಾನ. ಇದು ಮಕ್ಕಳ ದಿನಾಚರಣೆ ಪ್ರಯುಕ್ತ ಸ್ಪರ್ಧಾತ್ಮಕ ಆಟಗಳು, ಇನ್ನಿತರ ವಿನೋದಗಳಿಂದ ಕೂಡಿದ ಉಲ್ಲಾಸದಾಯಕ ಆಟೋಟಗಳು ಮತ್ತು ಅದರ ಫಲಾನುಭವಿಗಳಾದ 750ಮಕ್ಕಳಿಗೆ ಭಾರೀ ಔತಣ ಕೂಟವನ್ನು ಬೆಂಗಳೂರಿನಲ್ಲಿ ಆಯೋಜಿಸಿತ್ತು. ಚಿತ್ರನಟಿ ಸುಧಾರಾಣಿ ಕಾರ್ಯಕ್ರಮದಲ್ಲಿ ಹಾಜರಿದ್ದು ಬಹುಮಾನ ವಿತರಣೆ ಮಾಡಿ, ಮಕ್ಕಳೊಂದಿಗೆ ಮಾತನಾಡಿ, ಅವರಿಗೆ ಅಕ್ಷಯ ಪಾತ್ರ ವಿಶೇಷ ಹಬ್ಬದಡಿಗೆಯನ್ನು ಬಡಿಸುವ ಮೂಲಕ ಮತ್ತಷ್ಟು ಉತ್ಸಾಹ ತುಂಬಿದರು.
ಉತ್ಸವದಲ್ಲಿ ಬಣ್ಣ ತುಂಬುವುದು, ಚಿತ್ರರಚನೆ, ಪ್ರಬಂಧ ರಚನೆ, ರಸಪ್ರಶ್ನೆ, ವೇಷಭೂಷಣ ಸ್ಪರ್ಧೆ, ಸಮೂಹ ನೃತ್ಯ ಮತ್ತು ಗಾಯನ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಪ್ರಾರಂಭಿಕ ಸುತ್ತಿನ ಸ್ಪರ್ಧೆಗಳು ನ.12ರಂದು ಮತ್ತು ಅಂತಿಮ ಸುತ್ತಿನ ಸ್ಪರ್ಧೆಗಳು ನ.14ರಂದು ನಡೆದವು. ಕಾರ್ಯಕ್ರಮವನ್ನು 'ದ ಆಕ್ಟಿವಿಟಿ" ಸಂಸ್ಥೆಯು ನಿರ್ವಹಿಸಿತ್ತು. ಉತ್ಸವದ ವಿಶೇಷ ಭೋಜನದಲ್ಲಿ ಕೊಬ್ಬರಿ ಮಿಠಾಯಿ, ಬಿಸಿಬೇಳೆ ಬಾಥ್, ವಿಶೇಷ ಮೊಸರನ್ನ, ಕಾರ್ನ್‌ಫ್ಲೇಕ್, ಚೌಚೌ, ಮಸಾಲಾ ವಡೆ ಮತ್ತು ಪಾನಕಗಳನ್ನು ನೀಡಲಾಗಿತ್ತು. ಮಕ್ಕಳು ಈ ವಿಶೇಷ ಭೋಜನವನ್ನು ಆನಂದದಿಂದ ಸವಿದರು.
ಶ್ರೀರಾಮಪುರ ಪ್ರಾಥಮಿಕ ಶಾಲೆ, ಶ್ರೀರಾಮಪುರ ಹುಡುಗರ ಹೈಸ್ಕೂಲ್ ಮತ್ತು ಶ್ರೀರಾಮಪುರದ ಹುಡುಗಿಯರ ಹೈಸ್ಕೂಲ್‌ಗಳಿಂದ 750ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಕ್ಷಯ ಪಾತ್ರೆಯ ಮಕ್ಕಳ ದಿನಾಚರಣೆಯ ಉತ್ಸವದಲ್ಲಿ ಭಾಗವಹಿಸಲು ಸಂಭ್ರಮದಿಂದ ನೆರೆದಿದ್ದರು.
ಚಂಚಲಾಪತಿ ದಾಸರು, ಉತ್ಸವ ಮತ್ತು ಭೋಜನ ಕೂಟವು ಮಕ್ಕಳಿಗೆ ತಮ್ಮನ್ನು ತಾವು ವೇದಿಕೆ ಮೇಲೆ ಸಾಬೀತು ಪಡಿಸಿಕೊಳ್ಳುವ ಅವಕಾಶ ನೀಡಲು ಮತ್ತು ಅವರಲ್ಲಿ ಆತ್ಮವಿಶ್ವಾಸ ತುಂಬುವ ಸಲುವಾಗಿ ಆಯೋಜಿಸಿದ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮಗಳು ಅಷ್ಟೇನೂ ಪ್ರೋತ್ಸಾಹದಾಯಕವಲ್ಲದ ಕುಟುಂಬ ಮತ್ತು ವಾತಾವರಣದಿಂದ ಬಂದ ಸೌಲಭ್ಯ ವಂಚಿತ ಮಕ್ಕಳಲ್ಲಿ ಆತ್ಮವಿಶ್ವಾಸ ಮತ್ತು ಆತ್ಮಗೌರವವನ್ನು ಕಟ್ಟಿಕೊಡಲು ಸಹಕಾರಿಯಾಗಿವೆ ಎಂದು ಅಭಿಪ್ರಾಯ ಪಟ್ಟರು.
ಮಕ್ಕಳನ್ನುದ್ದೇಶಿಸಿ ಮಾತನಾಡಿದ ಸುಧಾರಾಣಿಯವರು, ಮಕ್ಕಳಿಗೆ ದೊಡ್ಡ ದೊಡ್ಡ ಕನಸುಗಳನ್ನು ಕಾಣುವಂತೆ ಪ್ರೋತ್ಸಾಹಿಸಿದರು. ಅಲ್ಲದೆ, ಶಾಲಾ ಮಕ್ಕಳೊಂದಿಗೆ ಮಕ್ಕಳ ದಿನವನ್ನೂ ಆಚರಿಸಲು ನನಗೆ ಸಂತೋಷವಾಗುತ್ತಿದೆ. ಇಂಥ ಒಂದು ವಿಶೇಷ ದಿನವನ್ನು ವಿದ್ಯಾರ್ಥಿಗಳಿಗೆ ಮತ್ತೆ ನನಗೆ ಒದಗಿಸಿಕೊಟ್ಟ ಅಕ್ಷಯ ಪಾತ್ರ ಪ್ರತಿಷ್ಠಾನಕ್ಕೆ ವಂದನೆಗಳು ಎಂದು ಹರ್ಷ ವ್ಯಕ್ತಪಡಿಸಿದರು.
(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications