ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೊಂದು ಬಹಿರಂಗ ಪತ್ರ

By Staff
|
Google Oneindia Kannada News

An open Letter to B.S.Yediyurappaನೂತನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ನಮಸ್ಕಾರ.

ಕತ್ತಲು ಬೆಳಕು ನಿಮಗೇನು ಹೊಸತಲ್ಲ. ಎಲ್ಲವೂ ಮುಗಿಯಿತು ಎನ್ನುವಾಗಲೇ, ದೀಪಾವಳಿಯ ಬೆಳಕು ನಿಮ್ಮ ಬದುಕಿಗೆ ಪ್ರವೇಶಿಸಿದೆ. ಇಂದು ಬೆಳಗ್ಗೆ ವಿಧಾನಸೌಧದ ಮೆಟ್ಟಿಲ ಮೇಲೆ ನಿಂತು ಪ್ರಮಾಣ ವಚನ ಸ್ವೀಕರಿಸುವಾಗ, ನಿಮ್ಮ ಮುಖದಲ್ಲಿನ ಭಾವಗಳು ನಮಗೆ ಅರ್ಥವಾದವು. ರಾಜ್ಯದ ಸಿಎಂ ಕುರ್ಚಿ ಸಿಕ್ಕಿದ ಸಂತೋಷ ಒಂದು ಕಡೆ.. ಜವಾಬ್ದಾರಿ ಪೂರೈಸಿ ಬೆನ್ನು ತಟ್ಟಿಸಿಕೊಳ್ಳುವುದು ಹೇಗಪ್ಪ ಅನ್ನೋ ಭಯ ಇನ್ನೊಂದು ಕಡೆ. ಇದು ಸಹಜವೇ ಬಿಡಿ.

ಐದೂವರೆ ಕೋಟಿ ಕನ್ನಡಿಗರು ನಿಮ್ಮತ್ತ ಆಸೆಯ ಕಣ್ಗಳಿಂದೇನು ಇಂದು ನೋಡುತ್ತಿಲ್ಲ. ಯಾರು ಮುಖ್ಯಮಂತ್ರಿಯಾದರೆ ನಮಗೇನು? ಎಂಬ ಮನಸ್ಥಿತಿ ಬಹುತೇಕರಲ್ಲಿ. ಯಾರು ಬಂದರೂ ಏನೂ ಬದಲಾಗದು ಎಂಬ ನಿರುತ್ಸಾಹ ಜನರಲ್ಲಿದೆ. ಈ ಪೊರೆಯನ್ನು ಅಳಿಸುವ ಜವಾಬ್ದಾರಿ ಮತ್ತು ಸವಾಲು ನಿಮ್ಮ ಮುಂದಿದೆ. 20ತಿಂಗಳ ಹಿಂದೆ ಕುಮಾರಸ್ವಾಮಿ ನೇತೃತ್ವದಲ್ಲಿ ನಿಮ್ಮ ದೋಸ್ತಿ ಸರ್ಕಾರ ನಡೆದ ಹಾದಿ ಸುಸ್ಪಷ್ಟವಾಗಿದೆ. ಜನರು ಮತ್ತೆ ಕನಸು ಕಟ್ಟಲು ಶುರುಮಾಡಿದ ಸಂಗತಿ ನಿಮಗೆ ಗೊತ್ತಿದೆ. ಈ ಹಾದಿಯಲ್ಲಿನ ಕಲ್ಲುಮುಳ್ಳುಗಳ ಬದಿಗೆ ಸರಿಸುವ ಕೆಲಸ ಮಾಡಿದರೆ ಸಾಕು.. ಜನ ನಿಮ್ಮನ್ನು ಎಂದೂ ಮರೆಯುವುದಿಲ್ಲ.

ರಾಜಕೀಯ ಜೀವನವನ್ನೆಲ್ಲ ಬೀದಿಯಲ್ಲಿಯೇ ಕಳೆದ ನೀವು, ಘೋಷಣೆಗಳ ಸದ್ದಲ್ಲಿ ಬೆರೆತುಹೋಗಿರುವಿರಿ. ಹೋರಾಟವನ್ನೇ ಬದುಕು ಮಾಡಿಕೊಂಡ ನಿಮಗೆ, ಆಡಳಿತ, ಅಧಿಕಾರ ಇದೆಲ್ಲವೂ ಹೊಸತು. ಅನುಭವ ಯಾರಪ್ಪನ ಮನೆ ಆಸ್ತಿಯೂ ಅಲ್ಲ. ಮಹಾ ಅನುಭವಿಗಳಾದ ಹಿಂದಿನ ಮುಖ್ಯಮಂತ್ರಿಗಳು ಮಾಡಿದ ಘನಂಧಾರಿ(?) ಕೆಲಸಗಳು ಎಲ್ಲರಿಗೂ ಗೊತ್ತಿವೆ. ಮಾಡುವ ಮನಸ್ಥಿತಿ ಇದ್ದರೇ,ಏನು ಬೇಕಾದರೂ ಸಾಧ್ಯ ಎಂಬುದಕ್ಕೆ ಕುಮಾರಸ್ವಾಮಿ ಅಧಿಕಾರವಧಿಯೇ ಸಾಕ್ಷಿ.

ಇಂದು ಬೆಳಗ್ಗೆ ರೈತರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿ, ರೈತರ ಮನದಲ್ಲಿ ಹೊಸ ಕನಸನ್ನು ತಂದಿರುವಿರಿ. ನೀವು ಇತರೆ ಮುಖ್ಯಮಂತ್ರಿಗಳಂತೆಯೇ ರೈತರ ಹೆಸರಲ್ಲಿ ರಾಜಕೀಯ ಮಾಡುವುದಿಲ್ಲ ಎಂದು ನಾವಂತೂ ನಂಬಿದ್ದೇವೆ. ನಿರೀಕ್ಷೆಯನ್ನು ಹುಸಿ ಮಾಡಬೇಡಿ.

'ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿರುವದರ ಹಿಂದೆ ಆರೆಸ್ಸೆಸ್ ಹಿರಿಯರ ಶ್ರಮ, ತ್ಯಾಗ, ಬಲಿದಾನ ಅಡಗಿದೆ. ಆರೆಸ್ಸೆಸ್ ಕೃಪೆಯಿಂದಾಗಿ ನನಗೆ ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನ ಸಿಕ್ಕಿದೆ' ಇದು ಮುಖ್ಯಮಂತ್ರಿಯಾಗಿ ಕೇವಲ ಒಂದೆರಡು ಗಂಟೆಯಾಗಿಲ್ಲ, ಆಗಲೇ ನೀವು ಸಿಡಿಸಿದ ನುಡಿಮುತ್ತು ಕೆಲವರಲ್ಲಿ ಅನುಮಾನ ಹುಟ್ಟಿಸಿದೆ. ಬಿಜೆಪಿ ಎಂದರೆ ಅನಗತ್ಯವಾಗಿ ಬೆಚ್ಚುವ ಮಂದಿ(ಆ ರೀತಿ ಪ್ರಚೋದಿಸುವ ವ್ಯಕ್ತಿಗಳಿದ್ದಾರೆ)ನಿಜಕ್ಕೂ ನಿಮ್ಮನ್ನು ನಂಬಲು ಕೆಲ ಸಮಯ ಬೇಕಾಗುತ್ತದೆ. ನಿಮ್ಮ ನಡೆನುಡಿ, ನಿಮ್ಮ ಕಾರ್ಯಕ್ರಮಗಳೇ ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗದ ಜನರಲ್ಲಿ ಆತ್ಮವಿಶ್ವಾಸ ತುಂಬುತ್ತವೆ. ಆ ನಿಟ್ಟಿನಲ್ಲಿ ಸ್ವಲ್ಪ ಗಮನ ಹರಿಸಿ. ಆರೆಸ್ಸೆಸ್ ಗುರ್ ಎಂದರೂ ಪರವಾಗಿಲ್ಲ.

ನಿಮ್ಮ ಭಕ್ತಿ, ಶ್ರದ್ಧೆ, ನಂಬಿಕೆ, ವಿಶ್ವಾಸ ಇವೆಲ್ಲವೂ ಇರಲಿ. ಇವೆಲ್ಲವೂ ನಿಮ್ಮ ವೈಯಕ್ತಿಕ ಹಕ್ಕುಗಳು. ಆದರೆ ಅವುಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದು ಬೇಡ. ಕುರ್ಚಿಯ ಮೇಲೆ ಕೂತವರು ಬರೀ ಯಡಿಯೂರಪ್ಪ ಅಲ್ಲ, ಮುಖ್ಯಮಂತ್ರಿ ಯಡಿಯೂರಪ್ಪ ಎಂಬುದನ್ನು ಮರೆಯಬೇಡಿ. ಪೀಠಾಧಿಪತಿಗಳಿಗೆ ಗೌರವ ನೀಡಿ, ಅಡ್ಡಪಲ್ಲಕ್ಕಿ ಉತ್ಸವಕ್ಕೆ ಹೆಗಲು ನೀಡಿ.. ಏನಾದರೂ ಮಾಡಿಕೊಳ್ಳಿ. ಇದನ್ನು ಸಾರ್ವಜನಿಕವಾಗಿ ಯಾಕೆ ಮಾಡುತ್ತೀರಿ. ಯಾರಿಗೆ ಆಗಲಿ ಸಾರ್ವಜನಿಕವಾಗಿ ಅಡ್ಡದ್ದ ಸಾಷ್ಟಾಂಗ ನಮಸ್ಕಾರ ಹಾಕುವುದನ್ನು ಬಿಡಿ.

ನಿಮ್ಮನ್ನು ನಾವು ಗಮನಿಸುತ್ತಲೇ ಇದ್ದೇವೆ. ನೀವು ಅಧಿಕಾರಕ್ಕಾಗಿ ಇಷ್ಟು ಅಮ್ಮಾ ತಾಯಿ ಅನ್ನಬಾರದಿತ್ತು. ಆಸೆ ತಪ್ಪಲ್ಲ, ಆಸೆಗಾಗಿ ನಮ್ಮನ್ನು ನಾವು ಕೊಂದುಕೊಳ್ಳುವುದರಲ್ಲಿ ಯಾವ ಅರ್ಥವಿದೆ? ಯಾವ ಪುರುಷಾರ್ಥವಿದೆ? ಅಧಿಕಾರಕ್ಕಾಗಿ ಇನ್ನುಮುಂದೆಯೂ ಅಷ್ಟೇ, ಗೌಡರ ಮನೆ ತಟ್ಟುವ ಕೆಲಸ ಬಿಡಿ. ನೀವೂ ಮೂರು ತಿಂಗಳಿಡಿ, ಮೂರೇ ದಿನ ಇರಿ ಅದು ಮುಖ್ಯವಲ್ಲ. ನೀವು ಹೇಗೆ ನಡೆದುಕೊಂಡಿರಿ ಎಂಬುದಷ್ಟೇ ಮುಖ್ಯ. ಕಳೆದ 20ತಿಂಗಳು ಕಷ್ಟಪಟ್ಟು ಸಂಪಾದಿಸಿದ ಪುಣ್ಯವನ್ನು, ಒಂದೆರಡು ದಿನದಲ್ಲಿಯೇ ಕುಮಾರಸ್ವಾಮಿ ಕಳೆದುಕೊಂಡ ಇತಿಹಾಸ ನಿಮಗೆ ಗೊತ್ತಿದೆ. ನೀವು ಇನ್ನೊಬ್ಬ ಕುಮಾರಸ್ವಾಮಿ ಆಗಬೇಡಿ.

ನಿರೀಕ್ಷೆ ದೊಡ್ಡದಿದೆ. ಸಮಯ ಸಿಕ್ಕದಿದೆ. ಚಂದ್ರನನ್ನು ಕಿತ್ತುಕೊಂಡು ಬಂದು ಜನರಿಗೆ ಕೊಡಿ ಎಂದು ನಾವು ಹೇಳುವುದಿಲ್ಲ. ನಿಮ್ಮ ಕನಸೇನಿದೆ. ಈ ನಿಟ್ಟಿನಲ್ಲಿ ನಿಮ್ಮ ಪ್ರಯಾಣವೆಷ್ಟಿದೆ ಎನ್ನುವುದಷ್ಟೇ ಮುಖ್ಯ. ಹಿಂದಿನ ದೋಸ್ತಿ ಸರ್ಕಾರದ ಸಾರಾಯಿ ನಿಷೇಧ, ಒಂದಕ್ಕಿ ಲಾಟರಿ ನಿಷೇಧ, ಸೈಕಲ್ ವಿತರಣೆ, ಸಾಲ ಮನ್ನ ಮತ್ತಿತರ ಜನಪರ ಯೋಜನೆಗಳನ್ನು ಯಾರೂ ಮರೆತಿಲ್ಲ. ನಿಮ್ಮ ಯೋಚನೆ ಈ ದಿಕ್ಕಿನಲ್ಲಿಯೇ ಸಾಗಲಿ. ಗ್ರಾಮ ವಾಸ್ತವ್ಯ ಮಾಡಿ, ಜನರೊಂದಿಗೆ ಬೆರೆಯಿರಿ.

'ಮುಖ್ಯಮಂತ್ರಿಗಳ ನಿವಾಸ(ಕುಮಾರಕೃಪಾ) ಈ ಹಿಂದೆ ಅಧಿಕಾರಿಗಳ ಕೇಂದ್ರವಾಗಿತ್ತು. ಜನ ಸಾಮಾನ್ಯರಿಗೆ ಇಲ್ಲಿಗೆ ಪ್ರವೇಶ ಇರಲಿಲ್ಲ. ನಮ್ಮ ಕಾಲದಲ್ಲಿ ಜನರು ಇಲ್ಲಿಗೆ ಬಂದರು. ಮುಖ್ಯಮಂತ್ರಿ ಜೊತೆ ಕೂತು ಕಷ್ಟ ಹೇಳಿಕೊಂಡರು. ನಮಗೆ ಸಾಧ್ಯವಾದಷ್ಟನ್ನು ಮಾಡಿದ್ದೇವೆ. ಮುಂದಿನ ಮುಖ್ಯಮಂತ್ರಿಗಳು ಹೀಗೆ ಮಾಡಲಿ ನೋಡೋಣ.. ' ಎಂದು ಹೆಚ್.ಡಿ.ಕುಮಾರಸ್ವಾಮಿ, ಸಿಎಂ ಕುರ್ಚಿಯಿಂದ ಇಳಿದ ನಂತರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. ಅವರ ಮಾತು ನಿಜ. ಈ ವಿಚಾರದಲ್ಲಿ ಅವರ ಹಾದಿಯಲ್ಲಿ ಸಾಗಿದರೆ ಒಳ್ಳೆಯದು. ತಿನ್ನುವ ಮಂದಿ ಬಹಳ ಇದ್ದಾರೆ. ಅವರಿಗೆ ಕಡಿವಾಣ ಹಾಕಿ. ಲೋಕಾಯುಕ್ತಕ್ಕೆ ಪರಮಾಧಿಕಾರ ಕೊಡಿ. ಇವೆಲ್ಲವೂ ಹೇಳಿದಷ್ಟು ಸುಲಭವಲ್ಲ ಎಂಬುದು ನಮಗೆ ಗೊತ್ತಿದೆ. ಆದರೆ ನಿರೀಕ್ಷೆ ತಪ್ಪೇನಿಲ್ಲ ಅಲ್ವಾ?

ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರ ಹಿಡಿಯಲು ನಿಮ್ಮಿಂದ ಸಾಧ್ಯವಾಯಿತು. ಬಿಜೆಪಿ ಪಾಲಿಗೆ ಬೆಳಕಾದಂತೆ, ಕನ್ನಡದ ಪಾಲಿಗೂ ನೀವು ಬೆಳಕಾಗಬೇಕಿದೆ. 'ಇಷ್ಟು ವರ್ಷಗಳಲ್ಲಿ ಕರ್ನಾಟಕ ಕನ್ನಡ ಸರ್ಕಾರವನ್ನು ಕಾಣಲಿಲ್ಲ.ಹೀಗಾಗಿಯೇ ಕನ್ನಡ ಸಮಸ್ಯೆಗಳು ಇಂದಿಗೂ ಜೀವಂತ' ಎಂದು ಚಂಪಾ ಆಗಾಗ ಗೊಣಗುತ್ತಾರೆ. ಕನ್ನಡಕ್ಕಾಗಿ ನೀವು ಏನಾದರೂ ಮಾಡಲೇಬೇಕು. ನಿಮ್ಮನ್ನು ಕನ್ನಡಿಗರು ಸದಾ ನೆನಪಲ್ಲಿಟ್ಟುಕೊಳ್ಳುವಂಥಾ ಯಾವುದೇ ಒಂದು ಕೆಲಸ, ಒಂದೇ ಒಂದು ಕೆಲಸ ಪ್ಲೀಸ್ ಮಾಡಿ. ಹಿಂದಿನ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಕನ್ನಡದ ಬಗ್ಗೆ ಕೀಳರಿಮೆ. ನನಗೆ ಇಂಗ್ಲಿಷ್ ಬರೋದಿಲ್ಲ ಎಂಬುದು ಅವರ ಕೊರಗು. ಇಂಥ ಕೀಳರಿಮೆ ನಿಮಗೆ ಬೇಡ. ನೀವು ಕನ್ನಡದಲ್ಲಿಯೇ ಮಾತನಾಡಿ.. ಮಾಧ್ಯಮಗಳಲ್ಲೂ ಕನ್ನಡ ಡಿಂಡಿಮ ಮೊಳಗಲಿ.

ಕಡಿದಾಳ್ ಮಂಜಪ್ಪ, ಎಸ್ ಬಂಗಾರಪ್ಪ ಮತ್ತು ಜಿ.ಹೆಚ್. ಪಟೇಲ್ ಬಿಟ್ಟರೇ ಶಿವಮೊಗ್ಗ ಜಿಲ್ಲೆಯಿಂದ ಆಯ್ಕೆಯಾಗುತ್ತಿರುವ ನಾಲ್ಕನೇ ಮುಖ್ಯಮಂತ್ರಿ ನೀವೇ ಆಗಿದ್ದೀರಿ. 64ವರ್ಷದ ಈ ಕಾಲಘಟ್ಟದಲ್ಲಿ ಬದಲಾವಣೆ ಮಾಡುವ ಅವಕಾಶ ನಿಮ್ಮ ಮುಂದಿದೆ. ನಿಮ್ಮ ಕೈಯೊಳಗಿನ ಅಧಿಕಾರವೆಂಬ ಮಂತ್ರದಂಡ ಕರಗಿ ಹೋಗುವ ಮುನ್ನ, ಏನಾದರೂ ಮಾಡಿ. ಕೋಪ, ಸಿಟ್ಟು ಇವೆಲ್ಲವೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಊಟದಲ್ಲಿ ಸ್ವಲ್ಪ ಉಪ್ಪು ಕಡಿಮೆ ಮಾಡಿ. ಎಲ್ಲವೂ ಸರಿ ಹೋಗುತ್ತದೆ.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆಯ ಯಡಿಯೂರಪ್ಪ, ನೀವು ಹೋದ ಪುಟ್ಟ ಬಂದ ಪುಟ್ಟ ಆಗಬೇಡಿ.

ನಮಸ್ಕಾರ.

ಹ.ಚ.ನಟೇಶ ಬಾಬು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X