ಶೆಟ್ಟರ್ ಮತ್ತು ಅಶೋಕ್ ಸೇರಿದಂತೆ ನಾಲ್ವರಿಗೆ ಸಚಿವ ಸ್ಥಾನ
ಬೆಂಗಳೂರು, ನ.12 : ಬಿ.ಎಸ್.ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿ, ಬಿಜೆಪಿಯ ನಾಲ್ವರು ಶಾಸಕರು ಸಚಿವರಾಗಿ ಇಂದು ಮಧ್ಯಾಹ್ನ 12ಗಂಟೆಗೆ ಪ್ರಮಾಣ ವಚನ ಸ್ವೀಕರಿಸಿದರು. ಪ್ರಮಾಣ ವಚನ ಸ್ವೀಕಾರ ಸಮಾರಂಭ ಕೇವಲ ಹತ್ತೆ ನಿಮಿಷಗಳಲ್ಲಿ ಮುಕ್ತಾಯವಾಯಿತು.
ಬಿಜೆಪಿಯ ಜಗದೀಶ್ ಶೆಟ್ಟರ್, ಆರ್.ಅಶೋಕ್, ಗೋವಿಂದ ಕಾರಜೋಳ, ಬಿ.ಎಸ್.ಆಚಾರ್ಯ ಅವರಿಗೆ ರಾಜ್ಯಪಾಲ ರಾಮೇಶ್ವರ ಠಾಕೂರು ಪ್ರಮಾಣ ವಚನ ಬೋಧಿಸಿದರು.
ಉಪಮುಖ್ಯಮಂತ್ರಿಯಾಗಿ ಯಾರೂ ಪ್ರಮಾಣ ವಚನ ಸ್ವೀಕರಿಸಲಿಲ್ಲ. ಉಪಮುಖ್ಯಮಂತ್ರಿ ಸ್ಥಾನಕ್ಕೆ ಹೆಚ್.ಡಿ.ಕುಮಾರಸ್ವಾಮಿ ಮತ್ತು ಹೆಚ್.ಡಿ.ರೇವಣ್ಣ ಅವರ ಹೆಸರು ಕೇಳಿಬಂದಿದ್ದು, ಇನ್ನೂ ಸ್ಪಷ್ಟವಾದ ತೀರ್ಮಾನ ಹೊರಬಿದ್ದಿಲ್ಲ. ನ.18ರಂದು ಉಪಮುಖ್ಯಮಂತ್ರಿ ಮತ್ತು ಜೆಡಿಎಸ್ ಶಾಸಕರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಇಂದು ಮಧ್ಯಾಹ್ನ ನೂತನ ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟ ಸಭೆಯನ್ನು ನಡೆಸಲಿದ್ದಾರೆ. ಅವಧಿ ಪೂರ್ಣಗೊಳಿಸುವ ವಿಶ್ವಾಸವನ್ನು ವ್ಯಕ್ತಡಿಸಿರುವ ಯಡಿಯೂರಪ್ಪ, ಸುಭದ್ರ ಸರ್ಕಾರ ನೀಡುವುದಾಗಿ ಸುದ್ದಿಗಾರರ ಬಳಿ ಹೇಳಿದ್ದಾರೆ. ಇದು ಸಮ್ಮಿಶ್ರ ಸರ್ಕಾರವಾದರೂ, ಬಿಜೆಪಿಯ ಧ್ವಜಗಳೇ ರಾಜಧಾನಿಯಲ್ಲಿ ಕಾಣಿಸುತ್ತಿವೆ. ಜೆಡಿಎಸ್ ಕಾರ್ಯಕರ್ತರು ಮತ್ತು ನಾಯಕರಲ್ಲಿ ಉತ್ಸಾಹ ಕಾಣಿಸುತ್ತಿಲ್ಲ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications