ಲಕ್ಷ್ಮೀ ಕಣ್ ತೆರೆದು,ಅಮ್ಮನ ಕಂಡು ಮುಖ ಅರಳಿಸಿದಳು!
ಬೆಂಗಳೂರು, ನ.09 : ನಾಲ್ಕು ಕಾಲು ಮತ್ತು ನಾಲ್ಕು ಕೈಗಳ ಎರಡು ವರ್ಷದ ಬಾಲಕಿ ಲಕ್ಷ್ಮೀ, ಈಗ ಸಹಜ ಸ್ಥಿತಿಗೆ ಮರಳಿದ್ದಾಳೆ. ಶಸ್ತ್ರ ಚಿಕಿತ್ಸೆ ನಂತರ ತೀವ್ರ ನಿಗಾ ಘಟಕದಲ್ಲಿರುವ ಲಕ್ಷ್ಮೀ, ಪ್ರಜ್ಞಾವಸ್ಥೆಗೆ ಮರಳಿದ್ದಾಳೆ ಎಂದು ವೈದ್ಯರು ಶುಕ್ರವಾರ(ನ.09)ತಿಳಿಸಿದ್ದಾರೆ.
ಕಣ್ಣು ಬಿಟ್ಟ ಲಕ್ಷ್ಮೀ ತನ್ನ ತಾಯಿಯನ್ನು ಕಂಡು ನಕ್ಕಳು ಎಂದಿರುವ ವೈದ್ಯರು, ಆಕೆ ಕೈ ಮತ್ತು ಕಾಲುಗಳನ್ನು ಅಲುಗಾಡಿಸುತ್ತಿದ್ದಾಳೆ. ಎಲ್ಲವೂ ಪೂರಕವಾಗಿದೆ. ಇನ್ನೇನು ತೊಂದರೆಯಿಲ್ಲ. ಸುಮಾರು 27ಗಂಟೆಗಳ ಸುದೀರ್ಘ ಶಸ್ತ್ರ ಚಿಕಿತ್ಸೆ ಫಲಿಸಿದ್ದು, ಕ್ರಮೇಣ ಲಕ್ಷ್ಮೀ ಸಾಮಾನ್ಯರಂತೆಯೇ ಬದಲಾಗಲಿದ್ದಾಳೆ. ಇದಕ್ಕೆ ದೀರ್ಘ ಕಾಲ ಬೇಕಾಗಬಹುದು ಎನ್ನುತ್ತಾರೆ ಸ್ಪರ್ಶ್ ಆಸ್ಪತ್ರೆಯ ವೈದ್ಯರು.
ನಾರಾಯಣ ಹೆಲ್ತ್ ಸಿಟಿಯ ಒಂದು ಭಾಗವಾದ ಸ್ಪರ್ಶ್ ಆಸ್ಪತ್ರೆಯಲ್ಲಿ ಇಂಥ ಕ್ಲಿಷ್ಟಕರವಾದ ಶಸ್ತ್ರ ಚಿಕಿತ್ಸೆ ನಡೆದಿದೆ. ಬಿಹಾರದ ಲಕ್ಷ್ಮೀ ತಂದೆ ಶಂಭು ಮತ್ತು ತಾಯಿ ಪೂನಂ ಹರ್ಷ ವ್ಯಕ್ತಪಡಿಸಿದ್ದಾರೆ. ಅ.3ರಂದು ನಗರಕ್ಕೆ ಲಕ್ಷ್ಮೀ ಜೊತೆ ಪೋಷಕರು ಆಗಮಿಸಿದ್ದರು. ಆಗ ಆತಂಕದ ಕಾರ್ಮೋಡ. ಈಗ ಸಂತೋಷದ ಬೆಳದಿಂಗಳು.
ಲಕ್ಷ್ಮೀಯನ್ನು ಅವರ ಊರಿನಲ್ಲಿ ದೇವರೆಂದೇ ನಂಬಿದ್ದಾರೆ. ಅನೇಕರು ಹರಕೆ ಕಟ್ಟಿಕೊಂಡು,ಪೂಜೆ ಮಾಡಿದ್ದು ಸಹಾ ಉಂಟು. ಸರ್ಕಸ್ ಕಂಪನಿಗಳು ಲಕ್ಷ್ಮೀಯನ್ನು ಖರೀದಿಸಲು ಪೋಷಕರಿಗೆ ಹಣದ ಆಮಿಷವೊಡ್ಡಿದ್ದು ಸಹಾ ಉಂಟು. ಅಸಹಜತೆಯನ್ನು ಸಹಜ ಸ್ಥಿತಿಗೆ ತಂದ, ವೈದ್ಯಕೀಯ ಲೋಕಕ್ಕೆ ನಮ್ಮದೊಂದು ಅಭಿನಂದನೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications