ಯಡಿಯೂರಪ್ಪ ಮುಖ್ಯಮಂತ್ರಿ; ಹೆಚ್ ಡಿಕೆ ಡಿಸಿಎಂ??!!-
ಬೆಂಗಳೂರು, ಅ.08 : ಮುಖ್ಯಮಂತ್ರಿ ರಾಜೀನಾಮೆಗೆ ಕ್ಷಣಗಣನೆ ಆರಂಭಗೊಂಡಿರುವ ಬೆನ್ನಲ್ಲಿಯೇ, ಮಹತ್ವದ ರಾಜಕೀಯ ಬೆಳವಣಿಗೆಗಳು ತೆರೆಮರೆಯಲ್ಲಿ ನಡೆಯುತ್ತಿವೆ. ರಹಸ್ಯ ಸ್ಥಳದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮಾತುಕತೆ ನಡೆದಿದೆ ಎಂಬ ವಿಚಾರ, ದಟ್ಸ್ ಕನ್ನಡ ಸುದ್ದಿಮನೆ ತಲುಪಿದೆ.
ರಾಜಕೀಯದಲ್ಲಿ, ಅದರಲ್ಲೂ ಕೊನೆ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು. ಈಗ ಮುಖ್ಯಮಂತ್ರಿ ಸ್ಥಾನವನ್ನು ಯಡಿಯೂರಪ್ಪ ಅವರಿಗೆ ಬಿಟ್ಟುಕೊಡಲು ಜೆಡಿಎಸ್ ಸಮ್ಮತಿಸಿದ್ದು, ಉಪಮುಖ್ಯಮಂತ್ರಿ ಸ್ಥಾನ ಕುಮಾರಸ್ವಾಮಿಗೆ ದೊರಕುವ ಸಾಧ್ಯತೆಗಳಿವೆ. ತುಮಕೂರಿನಲ್ಲಿ ಸೋಮವಾರ ನಡೆದ ಜನಾಂದೋಲನ ಸಭೆ ನಂತರ, ಬಿಜೆಪಿ ನಾಯಕರು ದಿಢೀರ್ ಬೆಂಗಳೂರಿಗೆ ದೌಡಾಯಿಸಿದ್ದಾರೆ. ಗುಪ್ತ ಸಭೆಯಲ್ಲಿ ಉಭಯ ಪಕ್ಷಗಳ ನಾಯಕರು ಪಾಲ್ಗೊಂಡಿದ್ದಾರೆ. ಬಿಜೆಪಿ ಅಧ್ಯಕ್ಷ ಸದಾನಂದ ಗೌಡ ಸೇರಿದಂತೆ ಯಾರ ಮೊಬೈಲ್ ಗಳು ಸಂಪರ್ಕಕ್ಕೆ ದೊರಕುತ್ತಿಲ್ಲ.
ಬಿಜೆಪಿ ಜೊತೆ ಮರುಮೈತ್ರಿಗೆ ಕುಮಾರಸ್ವಾಮಿ ಸಹೋದರ ಹೆಚ್.ಡಿ.ರೇವಣ್ಣ ಸಮ್ಮತಿಸಿಲ್ಲ. ಅವರ ಮನವೊಲಿಸುವ ಪ್ರಯತ್ನಗಳು ನಡೆದಿವೆ. ಈ ನಿಟ್ಟಿನಲ್ಲಿ ಇಂದು ರಾತ್ರಿ ಜೆಡಿಎಸ್ ಶಾಸಕರ ಸಭೆ ನಡೆಯಲಿದೆ ಎನ್ನಲಾಗಿದೆ.
ಇಂದು ಸಂಜೆ ರಾಜ್ಯಪಾಲರಿಗೆ ತಮ್ಮ ರಾಜೀನಾಮೆ ಸಲ್ಲಿಸಲಿರುವ ಕುಮಾರಸ್ವಾಮಿ, ಈ ಅನಿರೀಕ್ಷಿತ ಬೆಳವಣಿಗೆಗಳನ್ನು ವಿವರಿಸಿ, ಸರ್ಕಾರ ರಚಿಸಲು ಬಿಜೆಪಿಗೆ ಆಹ್ವಾನ ನೀಡಬೇಕೆಂದು ಮನವಿ ಸಲ್ಲಿಸಲಿದ್ದಾರೆ. ನಂತರ ರಾಜ್ಯಪಾಲರಿಂದ ಸರ್ಕಾರ ರಚನೆಗೆ ಯಡಿಯೂರಪ್ಪ ಅಹ್ವಾನ ಕೋರಲಿದ್ದಾರೆ ಎನ್ನಲಾಗಿದೆ. ಮತ್ತೊಂದು ರಾಜಕೀಯ ಧ್ರುವೀಕರಣಕ್ಕೆ ವೇದಿಕೆ ಸಜ್ಜಾಗುತ್ತಿದೆಯೇ ಎಂಬ ಕುತೂಹಲ ರಾಜಕೀಯ ವಲಯದಲ್ಲಿದೆ.
ಇಷ್ಟಕ್ಕೂ ಜೆಡಿಎಸ್ ನಲ್ಲಿ ಏನಾಗುತ್ತಿದೆ?
ನಿಗದಿಯಂತೆ ಸೋಮವಾರ ಮಧ್ಯಾಹ್ನ ರಾಜ್ಯಪಾಲರನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಭೇಟಿ ಮಾಡಿದರು. ವಿಶ್ವಾಸ ಮತ ಇಲ್ಲದ ಕಾರಣ ರಾಜೀನಾಮೆ ನೀಡಿ ಎಂದು ರಾಜ್ಯಪಾಲರು ಸಲಹೆ ನೀಡಿದರು. ಆ ಕೂಡಲೇ ಕಾಲಾವಕಾಶ ಕೋರಿದ ಮುಖ್ಯಮಂತ್ರಿ, ರಾಜಭವನದ ಹಿಂಬಾಗಿಲಿನಿಂದ ಹೊರಬಂದು ದೇವೇಗೌಡರ ನಿವಾಸಕ್ಕೆ ಕುಮಾರಸ್ವಾಮಿ ತೆರಳಿದರು. ಸುಮಾರು ಸಮಯ ತಂದೆ ಮಗನ ನಡುವೆ ಸುದೀರ್ಘ ಮಾತುಕತೆ ನಡೆಯಿತು. ಈ ಸಂದರ್ಭದಲ್ಲಿ ಏನಾಯಿತೋ ಗೊತ್ತಿಲ್ಲ. ದಿಢೀರ್ ಬೆಳವಣಿಗೆಗಳು ನಡೆದಿವೆ.
ಅಂತಿಮ ಕ್ಷಣದಲ್ಲಿ ನಡೆಯುತ್ತಿರುವ ರಾಜಕೀಯ ಚಟುವಟಿಕೆಗಳಿಂದ ಬಿಜೆಪಿ ಮತ್ತು ಜೆಡಿಎಸ್ ನಡುವೆ ಮರು ದೋಸ್ತಿ ಸಾಧ್ಯವೇ? ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications