ಮರ್ಯಾದೆಯಿಂದ ಅಧಿಕಾರ ಬಿಟ್ಟು ಕೊಡಿ : ಯಡಿಯೂರಪ್ಪ
ನವದೆಹಲಿ, ಅ.04 : ಜೆಡಿಎಸ್ ಪಕ್ಷದ ಯಾವುದೇ ಷರತ್ತುಗಳನ್ನು ಒಪ್ಪಲು ನಾವು ಸಿದ್ಧರಿಲ್ಲ. ದೇವರಿದ್ದಾನೆ.. ನಾವು ಯಾವುದೇ ಪರಿಸ್ಥಿತಿ ಎದುರಿಸಲೂ ಸಿದ್ಧರಿದ್ದೇವೆ ಎಂದು ಉಪಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ(ಅ.05)ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು, ಬಿಜೆಪಿ ಮತ್ತು ಜೆಡಿಎಸ್ ನಡುವೆ ಆಗಿರುವುದು ಗುಪ್ತ ಒಪ್ಪಂದವೇನಲ್ಲ. ಅದು ರಾಜ್ಯದ ಜನರಿಗೆಲ್ಲ ಗೊತ್ತಿದೆ. ಎಲ್ಲವನ್ನೂ ಜನರು ನೋಡುತ್ತಿದ್ದಾರೆ. ಗೌರವದಿಂದ ಅಧಿಕಾರವನ್ನು ಬಿಟ್ಟುಕೊಡಬೇಕು. ಎಲ್ಲಕ್ಕಿಂತಲೂ ನಮಗೆ ರಾಜ್ಯದ ಅಭಿವೃದ್ಧಿಯೇ ಮುಖ್ಯ. ಕಳೆದ 20ತಿಂಗಳು ನಾವು ಸಹಕಾರ ಕೊಟ್ಟಿದ್ದೇವೆ.ಈಗ ಜೆಡಿಎಸ್ ಕೊಡಲಿ ಎಂದರು.
ಅಧಿಕಾರ ಹಸ್ತಾಂತರದಲ್ಲಿ ದೇವೇಗೌಡರ ಹಸ್ತಕ್ಷೇಪದಿಂದ ನಮಗೇನೂ ಬೇಸರವಾಗಿಲ್ಲ. ಅಧಿಕಾರ ಹಸ್ತಾಂತರವಾಗುವ ಬಗ್ಗೆ ನನಗೆ ಈಗಲೂ ವಿಶ್ವಾಸವಿದೆ ಜೊತೆಗೆ ಬಿಜೆಪಿ ನಿಲುವಲ್ಲಿ ಯಾವುದೇ ಬದಲಾವಣೆ ಇಲ್ಲ. ಕಳೆದ 50ವರ್ಷಗಳಲ್ಲಿ ದೇಶದ ಯಾವುದೇ ರಾಜ್ಯದಲ್ಲಾಗದ ಅಭಿವೃದ್ಧಿ ಕಳೆದ 20ತಿಂಗಳಲ್ಲಿ ಕರ್ನಾಟಕದಲ್ಲಾಗಿದೆ. ಈ ಸರ್ಕಾರ ಮುಂದುವರೆಯಬೇಕು ಎಂದು ಯಡಿಯೂರಪ್ಪ ಅಭಿಪ್ರಾಯಪಟ್ಟರು.
ಸಮ್ಮಿಶ್ರ ಸರ್ಕಾರದ ಸಾಧನೆಗಳು ಒಂದು ಪಕ್ಷದ ಸಾಧನೆಯಲ್ಲ. ಇದರಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸಮಾನ ಭಾಗಿಗಳು. ನಾನೂ ರೈತರ ಮಗ. ಮೊದಲಿನಿಂದಲೂ ಬಡವರು ಮತ್ತು ಕೂಲಿಗಾರರ ಪರವಾಗಿ ಕೆಲಸ ಮಾಡುತ್ತಾ ಬಂದವನು ನಾನು ಎಂದು ಯಡಿಯೂರಪ್ಪ ಹೇಳಿದರು.
(ಒನ್ ಇಂಡಿಯಾ ವಾರ್ತೆ)












Click it and Unblock the Notifications