ಡೆಲ್ಲಿಯಲ್ಲಿ ಇಂದಿನಿಂದ ಹಗ್ಗಜಗ್ಗಾಟ ಅರ್ಥಾತ್ ದೊಂಬರಾಟ!
ಬೆಂಗಳೂರು, ಅ.4 : ಅಧಿಕಾರ ಹಸ್ತಾಂತರ ಪ್ರಹಸನ ರಾಜಧಾನಿ ನವದೆಹಲಿಗೆ ಸ್ಥಳಾಂತರಗೊಂಡಿದೆ. ಇಂದು(ಅ.4) ಬಿಜೆಪಿ ರಾಷ್ಟ್ರೀಯ ರಾಜಕೀಯ ವ್ಯವಹಾರಗಳ ಸಮಿತಿ ಸಭೆ ನಡೆಯಲಿದ್ದು, ಬಿಜೆಪಿ ಒಲವು ನಿಲುವು ವ್ಯಕ್ತವಾಗಲಿದೆ.
ದೆಹಲಿಯಲ್ಲಿ ನಡೆಯಲಿರುವ ಬಿಜೆಪಿ ಸಭೆಯಲ್ಲಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್, ಉಪಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸದಾನಂದ ಗೌಡ, ಅನಂತಕುಮಾರ್ ಮತ್ತಿತರರು ಪಾಲ್ಗೊಳ್ಳುತ್ತಾರೆ.
ನವದೆಹಲಿಯಲ್ಲಿ ಬಿಜೆಪಿ ಅಧ್ಯಕ್ಷ ರಾಜನಾಥ ಸಿಂಗ್ ಮತ್ತು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಇಂದು ಭೇಟಿ ಮಾಡಿ, ಚರ್ಚೆ ನಡೆಸುವ ಸಾಧ್ಯತೆಗಳಿವೆ. ಇನ್ನು ಇದೇ ದಿನ ಬೆಂಗಳೂರಿನ ಅರಮನೆ ಮೈದಾನದಲ್ಲಿ ಜೆಡಿಎಸ್ ಶಾಸಕರ ಸಭೆ ನಡೆಯಲಿದೆ. ಇಲ್ಲಿನ ಜೆಡಿಎಸ್ ಕಾರ್ಯಕಾರಿ ಸಭೆ ನಂತರ ದೇವೇಗೌಡ, ಕುಮಾರಸ್ವಾಮಿ ಸೇರಿದಂತೆ ಪಕ್ಷದ ದಂಡು ದೆಹಲಿಗೆ ತೆರಳಲಿದೆ.
ಶುಕ್ರವಾರ(ಅ.5)ನಡೆಯಲಿರುವ ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ, ದೇವೇಗೌಡರು ಮಹತ್ವದ ನಿರ್ಧಾರ ಪ್ರಕಟಿಸುವ ಸಾಧ್ಯತೆಗಳಿವೆ. ಈ ಎಲ್ಲಾ ಬೆಳವಣಿಗೆಗಳಿಂದಾಗಿ, ಅಧಿಕಾರ ಹಸ್ತಾಂತರ ಪ್ರಹಸನ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಇನ್ನಷ್ಟು ದಿನಗಳು ಇದೇ ಗೋಳು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications