ಬೆಳಗಾವಿ ಈಗ ರಣರಂಗ : ಕರವೇ ಸದಸ್ಯರ ಮೇಲೆ ಹಲ್ಲೆ
ಬೆಳಗಾವಿ, ಸೆ.27 : ನಗರದ ಸ್ಥಳೀಯ ಸಂಸ್ಥೆ ಚುನಾವಣೆ ರಣರಂಗವಾಗುತ್ತಿದೆ. ಕನ್ನಡ ಪರ ಅಭ್ಯರ್ಥಿಗಳಿಗೆ ಮತ ನೀಡಿ ಎಂದು ಪ್ರಚಾರ ಮಾಡುತ್ತಿದ್ದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿದೆ. ಈ ಘಟನೆಯನ್ನು ಕನ್ನಡ ಪರ ಸಂಘಟನೆಗಳು ಗುರುವಾರ(ಸೆ.27) ಖಂಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿವೆ.
ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ರಾಜೀವ ಟೋಪಣ್ಣ ಮತ್ತು ಅವರ ಬೆಂಬಲಿಗರ ಮೇಲೆ ಮಾಜಿ ಉಪಮೇಯರ್ ಸುನೀಲ ಎಲ್.ಕುಡಚಿ,ಅವರ ಸಹೋದರ ಮತ್ತು ಅವರ ಗುಂಪು ಬುಧವಾರ ಮಧ್ಯಾಹ್ನ ಹಲ್ಲೆ ಮಾಡಿದೆ. ಉದ್ವಿಗ್ನ ವಾತಾವರಣ ಮುಂದುವರೆದಿದ್ದು, ಈ ಭಾಗದಲ್ಲಿ ಪೊಲೀಸರು ಬಿಗಿ ಬಂದೋಬಸ್ತು ಮಾಡಿದ್ದಾರೆ.
ಕಳೆದ ಸಲ ಸುನೀಲ ಕುಡಚಿ ಎಂಇಎಸ್ ಅಭ್ಯರ್ಥಿಯನ್ನು ಬೆಂಬಲಿಸಿದ್ದಾರೆ. ಹೀಗಾಗಿ ಅವರಿಗೆ ಮತ ನೀಡಬೇಡಿ. ಕನ್ನಡ ಅಭ್ಯರ್ಥಿಗೆ ಮತ ನೀಡಿ ಎಂದು ರಕ್ಷಣಾ ವೇದಿಕೆ ಈ ಭಾಗದಲ್ಲಿ ಪ್ರಚಾರ ನಡೆಸುತ್ತಿತ್ತು. ಈ ಸಂದರ್ಭದಲ್ಲಿ ಹಲ್ಲೆ ನಡೆದಿದೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications