ಚಕ್‌ದೆ ಇಂಡಿಯಾ ಪರಿಣಾಮ : ಹಾಕಿ ತಂಡಕ್ಕೆ ಬಹುಮಾನ
ಬೆಂಗಳೂರು, ಸೆ.27 : ಅಂತೂ ಪೆನಾಲ್ಟಿ ಶೂಟೌಟ್‌ನಲ್ಲಿ ಭಾರತ ಹಾಕಿ ತಂಡ ವಿಜಯಿಯಾಗಿದೆ.
ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂಬ ಮಲತಾಯಿ ಧೋರಣೆ ಅನುಸರಿಸುತ್ತಿದ್ದ ರಾಜ್ಯ ಸರ್ಕಾರ ಹಾಕಿ ಆಟಗಾರರ ಕೂಗಿಗೆ ಕೊನೆಗೂ ಕಿವಿ ನೀಡಿದೆ.
ಕ್ರಿಕೆಟ್‌ಗೆ ನೀಡುತ್ತಿರುವ ಮನ್ನಣೆಯಿಂದ ರೋಸಿದ್ದ ಹಾಕಿ ಪಟುಗಳ ನಿರಶನ ಹೂಡುವ ಬೆದರಿಕೆಗೆ ಮಣಿದು ಏಷ್ಯಾಕಪ್ ಹಾಕಿ ಟೂರ್ನಿಯನ್ನು ಗೆದ್ದ ಆಟಗಾರರಿಗೆ ತಲಾ 2 ಲಕ್ಷ ನೀಡುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ.
ಕರ್ನಾಟಕ ಸರ್ಕಾರ ಮಾತ್ರವಲ್ಲ ಭಾರತದ ಎಲ್ಲ ರಾಜ್ಯಗಳೂ ಈ ನಿಟ್ಟಿನಲ್ಲಿ ಯೋಚಿಸುವ ಅಗತ್ಯವಿದೆ. ಏರ್ ಇಂಡಿಯಾ ಟೀಮ್‌ಗೆ ಆಡುವ ಎಲ್ಲ ಕ್ರಿಕೆಟ್ಟಿಗರಿಗೂ ಬಡ್ತಿ ನೀಡಲಾಗಿದೆ ಆದರೆ ಅದೇ ಸಂಸ್ಥೆಯಲ್ಲಿ ದುಡಿಯುತ್ತಿರುವ ಹಾಕಿ ಆಟಗಾರರನ್ನು ಕಡೆಗಣಿಸಲಾಗಿದೆ ಎಂದು ಹಾಕಿ ಆಟಗಾರರು ಮನದ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ಟ್ವೆಂಟಿ20ಯಲ್ಲಿ ಭಾರತ ಕ್ರಿಕೆಟ್ ತಂಡದ ವಿಜಯವನ್ನು ಹಾಕಿ ಆಟದ ಪರಾಕಾಷ್ಠತೆಯನ್ನು ತೋರಿಸುವ ಚಕ್‌ದೆ ಇಂಡಿಯಾ ಚಿತ್ರದ ಎಫೆಕ್ಟ್ ಎಂದು ಎಲ್ಲೆಡೆ ಬಿಂಬಿಸಲಾಗಿತ್ತು. ಅದು ನಿಜವೂ ಹೌದು. ಆದರೆ ಭಾರತ ಕ್ರಿಕೆಟ್‌ಗೆ ಪ್ರೇರಣೆ ನೀಡಿದ ರಾಷ್ಟ್ರೀಯ ಆಟವನ್ನೇ ಕಡೆಗಣಿಸಿದ್ದು ಎಷ್ಟು ನ್ಯಾಯ ಎಂಬ ಕೂಗು ದೇಶದೆಲ್ಲೆಡೆ ಎದ್ದಿದೆ.
ಇತ್ತೀಚೆಗೆ ನಾಲ್ಕನೇ ಬಾರಿ ವಿಶ್ವ ಬಿಲಿಯರ್ಡ್ಸ್ ಪ್ರಶಸ್ತಿ ಗೆದ್ದ ಕರ್ನಾಟಕದ ಕುವರ ಪಂಕಜ್ ಅದ್ವಾನಿಗೂ ಸರ್ಕಾರದಿಂದ ಯಾವುದೇ ಮನ್ನಣೆ ದಕ್ಕಿಲ್ಲ.
ಹಾಕಿ ಆಟಗಾರರ ಹೋರಾಟದಿಂದ ಪ್ರೇರಿತರಾದ ಕಬಡ್ಡಿ ತಂಡದ ಆಟಗಾರರೂ ಈ ಕ್ರೀಡೆಯನ್ನು ಕಡೆಗಣಿಸಲಾಗುತ್ತಿದೆ ಎಂಬ ಕೂಗನ್ನು ಎತ್ತುತ್ತಿದ್ದಾರೆ.
ಕ್ರಿಕೆಟ್ ವೀರರಿಗೆ ಬಹುಮಾನ : ಹಾಕಿ ಆಟಗಾರರ ದಂಗೆ
(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications