ಕಡೆ 24ಗಂಟೆಯಲ್ಲಿ ಏನ್ಬೇಕಾದ್ರೂ ಆಗಬಹುದು: ಜೆಡಿಎಸ್
ಉಡುಪಿ, ಸೆಪ್ಟೆಂಬರ್ 21 : ಅಧಿಕಾರ ಹಸ್ತಾಂತರಕ್ಕೆ ಇಂದಿಗೆ(ಸೆ.21) ಕೇವಲ 11ದಿನ ಬಾಕಿ ಉಳಿದಿದೆ. ಇಂಥ ಹೊತ್ತಿನಲ್ಲಿ ಗೊಂದಲ ಗೂಡು ಕಟ್ಟುತ್ತಿದೆ. ಬಿಜೆಪಿ ಮತ್ತು ಜೆಡಿಎಸ್ ಪಾಳಯದಲ್ಲಿ ದಿನಕ್ಕೊಂದು ಹೊಸ ಮಾತು ಕೇಳಿ ಬರುತ್ತಿದೆ.
ಈ ಮಧ್ಯೆ, ಅಧಿಕಾರ ಹಸ್ತಾಂತರ ಸರಳ ಪ್ರಕ್ರಿಯೆಯಲ್ಲ. ಕೊನೆ ಕ್ಷಣದ ವರೆಗೆ ಏನೂ ಹೇಳಲಾಗದು. ಏನು ಬೇಕಿದ್ದರೂ ಆಗಬಹುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಮೆರಾಜುದ್ದೀನ್ ಪಟೇಲ್ ಸುದ್ದಿಗಾರರಿಗೆ ಸುಳಿವು ನೀಡಿದ್ದಾರೆ.
ಮುಂದಿನ 11ದಿನಗಳಲ್ಲಿ, ಕೊನೆಯ 24ಗಂಟೆಗಳಲ್ಲಿ ಏನು ಬೇಕಾದರೂ ಘಟಿಸಬಹುದು. ದೋಸ್ತಿ ಸರ್ಕಾರದ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಬಗ್ಗೆ ಬಿಜೆಪಿ ನಾಯಕರೊಂದಿಗೆ ದೇವೇಗೌಡ ಚರ್ಚೆ ನಡೆಸಲಿದ್ದಾರೆ. ಸರ್ಕಾರ ಮುಂದೆ ಸಾಗಬೇಕಾದ ದಿಕ್ಕಿನ ಬಗ್ಗೆ ಸಲಹೆ ನೀಡಲಿದ್ದಾರೆ. ಬಿಜೆಪಿ ಸಮ್ಮತಿಸದಿದ್ದರೆ, ಪರಿಸ್ಥಿತಿ ಬದಲಾಗುತ್ತದೆ ಎಂದಿರುವ ಮೆರಾಜುದ್ದೀನ್, ಈ ಬಗ್ಗೆ ವಿವರ ನೀಡಲು ನಿರಾಕರಿಸಿದ್ದಾರೆ.
ರಾಜ್ಯದಲ್ಲಿ ಸೆ.28ರಂದು ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದ್ದು, ಈ ಗಲಾಟೆಯಲ್ಲಿ ರಾಜಕೀಯ ಪಕ್ಷಗಳು ಮಗ್ನವಾಗಿವೆ. ಆದರೂ ಅಧಿಕಾರ ಹಸ್ತಾಂತರದ ಕಾವು ದಿನೇದಿನೇ ಏರುತ್ತಲೇ ಇದೆ. ಅಧಿಕಾರ ಉಳಿಸಿಕೊಳ್ಳಲು ಕುಮಾರಸ್ವಾಮಿ, ಗಳಿಸಿಕೊಳ್ಳಲು ಯಡಿಯೂರಪ್ಪ ನಿದ್ದೆ ಕೆಡಿಸಿಕೊಂಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications