ಸ್ಥಳೀಯ ಚುನಾವಣೆಗಳ ಎದುರಿಸಲು ಯಾರಿಗೂ ಮನಸ್ಸಿಲ್ಲ!
ಬೆಂಗಳೂರು, ಆಗಸ್ಟ್ 03 : 209 ನಗರ ಸ್ಥಳೀಯ ಸಂಸ್ಥೆಗಳ ಪೈಕಿ 163ರ ಚುನಾವಣೆ, ಆಗಸ್ಟ್ 30ರಂದು ನಡೆಯಲಿದೆ ಎಂದು ಚುನಾವಣಾ ಆಯೋಗದ ಆಯುಕ್ತ ಎಂ.ಆರ್.ಹೆಗಡೆ ಘೋಷಿಸಿದ್ದಾರೆ. ಆದರೆ ಚುನಾವಣೆ ಎದುರಿಸಲು ಯಾವ ಪಕ್ಷಕ್ಕೂ ಮನಸ್ಸಿಲ್ಲ.
ಚುನಾವಣಾ ಆಯೋಗ, ಮುಖ್ಯಮಂತ್ರಿಗಳ ಜೊತೆ ಚರ್ಚಿಸಲದೇ ಏಕಾಏಕಿ ದಿನಾಂಕ ಪ್ರಕಟಿಸಿದೆ ಎಂಬ ದೂರುಗಳು ಕೇಳಿ ಬಂದಿವೆ. ಹೇಗಾದರೂ ಮಾಡಿ ಚುನಾವಣೆ ದಿನಾಂಕ ಮುಂದೂಡುವಂತೆ ಮಾಡಲು ಆಡಳಿತ ಪಕ್ಷ ಕಸರತ್ತು ನಡೆಸಿದೆ. ಪ್ರತಿಪಕ್ಷವಾದ ಕಾಂಗ್ರೆಸ್ ಸಹಾ ಚುನಾವಣೆ ಸದ್ಯಕ್ಕೆ ಬೇಡ ಅನ್ನುತ್ತಿದೆ.
ಚುನಾವಣಾ ಪ್ರಕ್ರಿಯೆ :
ಸುದ್ದಿಗೋಷ್ಠಿಯಲ್ಲಿ ಚುನಾವಣಾ ಆಯುಕ್ತ ಎಂ.ಆರ್.ಹೆಗಡೆ, ಈಗಾಗಲೇ ವೇಳಾಪಟ್ಟಿ ಪ್ರಕಟಿಸಲಾಗಿದ್ದು, ಆಗಸ್ಟ್ 8ರಂದು ಆಯಾ ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಲಿದ್ದಾರೆ. ತಾಂತ್ರಿಕ ಕಾರಣಗಳಿಂದ ಹೊಸನಗರ ಪಟ್ಟಣ ಪಂಚಾಯ್ತಿ ಹಾಗೂ ಮಡಿಕೇರಿ ನಗರಸಭಾ ಚುನಾವಣೆ ನಡೆಸಲಾಗುತ್ತಿಲ್ಲ ಎಂದು ವಿವರಿಸಿದರು.
ಗುರುವಾರದಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. ಇದು ಸೆಪ್ಟೆಂಬರ್ 5ರವರೆಗೂ ಜಾರಿಯಲ್ಲಿರುತ್ತದೆ. ಸರ್ಕಾರ ಈ ಅವಧಿಯಲ್ಲಿ ಹೊಸ ಘೋಷಣೆ, ನೇಮಕಾತಿ ಅಥವಾ ವರ್ಗಾವಣೆ ಮಾಡುವಂತಿಲ್ಲ. ಆಗಸ್ಟ್ 16 ನಾಮಪತ್ರ ಸಲ್ಲಿಸಲು ಕೊನೆಯ ದಿನ . ಹಿಂತೆಗೆದುಕೊಳ್ಳಲು ಆಗಸ್ಟ್ 20 ಕೊನೆಯ ದಿನ. ಸೆಪ್ಟೆಂಬರ್ 2ರಂದು ಮತಗಳ ಎಣಿಕೆ ಎಂದು ಹೆಗಡೆ ಹೇಳಿದರು.
ಸರ್ಕಾರ ಜುಲೈ 31ರಂದು , 165 ಸ್ಥಳೀಯ ಸಂಸ್ಥೆಗಳ ವಾರ್ಡ್ ಮೀಸಲಾತಿ ಅಧಿಸೂಚನೆಯನ್ನು ಆಯೋಗಕ್ಕೆ ಸಲ್ಲಿಸಿತ್ತು. ಉಳಿದ ಸಂಸ್ಥೆಗಳ ವಾರ್ಡ್ ಮೀಸಲಾತಿ ಕಳುಹಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಬೃಹತ್ ಬೆಂಗಳೂರು ಮಹಾನಗರಪಾಲಿಕೆ ಚುನಾವಣೆಯಿಲ್ಲ :
ಬೆಂಗಳೂರು ಸೇರಿದಂತೆ 6 ಮಹಾನಗರಪಾಲಿಕೆಗಳಿಗೆ ಈ ಸಲ ಚುನಾವಣೆ ನಡೆಸುವುದಿಲ್ಲ. ಬೃಹತ್ ಬೆಂಗಳೂರು ಮಹಾನಗರಪಾಲಿಕೆ ವಾರ್ಡ್‌ಗಳ ಕ್ಷೇತ್ರ ವಿಂಗಡಣೆ ಆಗಿಲ್ಲ. ಹಾಗಾಗಿ ಚುನಾವಣೆಗೆ ಪರಿಗಣಿಸಿಲ್ಲ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications