ಸಾಮಾಜಿಕ ಧುರೀಣ ದೊಡ್ಮನೆ ಗಣೇಶ ಹೆಗಡೆ ವಿಧಿವಶ
ಸಿದ್ದಾಪುರ, ಜುಲೈ 21: ಉತ್ತರ ಕನ್ನಡ ಜಿಲ್ಲೆಯ ಹಿರಿಯ ಸಾಮಾಜಿಕ ಧುರೀಣ, ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆಯವರ ಹಿರಿಯ ಸೋದರ ದೊಡ್ಮನೆ ಗಣೇಶ ಹೆಗಡೆ ಶುಕ್ರವಾರ ಮಧ್ಯಾಹ್ನ ನಿಧನರಾದರು. ಅವರಿಗೆ 87ವರ್ಷ ವಯಸ್ಸಾಗಿತ್ತು.
ದೀರ್ಘಕಾಲದಿಂದ ಶ್ವಾಸಕೋಶ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ ಇವರು ಶುಕ್ರವಾರ ತೀವ್ರ ಅಸ್ವಸ್ಥರಾಗಿ, ಮಧ್ಯಾಹ್ನ ಸುಮಾರು 1ಗಂಟೆಗೆ ಕೊನೆಯುಸಿರೆಳೆದರು ಎಂದು ಕುಟುಂಬದವರು ತಿಳಿಸಿದ್ದಾರೆ.
ಮೃತರು ಪತ್ನಿ, ನಾಲ್ವರು ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಸಾಮಾಜಿಕ ಮುಖಂಡ:
ರಾಷ್ಟ್ರ ರಾಜಕೀಯದಲ್ಲಿ ಹೆಸರುವಾಸಿಯಾದ ದಿ.ರಾಮಕೃಷ್ಣ ಹೆಗಡೆ ಸೇರಿದಂತೆ, ರಘುನಾಥ್ ರಾವ್ ದೇಶಪಾಂಡೆ, ಪ್ರಮೋದ್ ಹೆಗಡೆ, ಆರ್.ಎಸ್. ನಾಯ್ಕ್,ಷಣ್ಮುಖ ಗೌಡ ಮುಂತಾದ ಮುಖಂಡರನ್ನು ತಯಾರು ಮಾಡಿದ ಕೀರ್ತಿ ಗಣೇಶ ಹೆಗಡೆಯವರಿಗೆ ಸಲ್ಲುತ್ತದೆ.
ಹಲವು ಪ್ರೌಢಶಾಲೆಗಳನ್ನು ,ಸಿದ್ದಾಪುರದಲ್ಲಿ ಪದವಿ ಕಾಲೇಜು, ಆಯುರ್ವೇದ ಕಾಲೇಜು ಮುಂತಾದ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು.ಚೇತನಾ ಸಹಕಾರಿ ಬ್ಯಾಂಕ್ ಸೇರಿದಂತೆ ಹಲವು ಪ್ರತಿಷ್ಠಿತ ಸಂಘ ಸಂಸ್ಥೆಗಳ ಸ್ಥಾಪಕ, ಅಧ್ಯಕ್ಷರಾಗಿ, ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.
ಸಿದ್ದಾಪುರದಲ್ಲಿನ ಶೃಂಗೇರಿ ಶಂಕರ ಮಠ, ದೊಡ್ಮನೆ ಶ್ರೀ ಲಕ್ಷ್ಮಿ ನಾರಾಯಣ ದೇವಾಲಯಗಳು ಸೇರಿದಂತೆ ಹಲವು ದೇವಾಲಯಗಳ ಪುನರುತ್ಠಾನದಲ್ಲಿ ಇವರ ಕೊಡುಗೆ ಹೆಚ್ಚಿನದು.
ಪತ್ರಿಕಾ ಸಂಪಾದಕರಾಗಿ ಮುನ್ನಡೆ ವಾರಪತ್ರಿಕೆಯನ್ನು ಹಲವು ವರ್ಷಗಳ ಕಾಲ ನಡೆಸಿದರು.
ಗಣೇಶ ಹೆಗಡೆಯವರ ನಿಧನಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ರಾಜಕೀಯ ಮುಖಂಡರು ಸಂತಾಪ ವ್ಯಕ್ತಪಡಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications