ಕನ್ನಡ ಗೆಳೆಯರಿಗೆ ಬರಹ ವಾಸು ಮಾಡುವ ನಮಸ್ಕಾರಗಳು..
ಕನ್ನಡ ಕಾರ್ಯಕ್ರಮದಲ್ಲಿ ಹಿಂದಿ ಪ್ರಾರ್ಥನೆ ಔಚಿತ್ಯ ಪ್ರಶ್ನಿಸಿ, ಅವಮಾನಕ್ಕೆ ಗುರಿಯಾದ ಕೆ.ಟಿ.ಚಂದ್ರಶೇಖರ್‌ಗೆ ಕನ್ನಡಿಗರ ನೈತಿಕ ಬೆಂಬಲ ವ್ಯಕ್ತವಾಗಿದೆ. ಘಟನೆ ಬಗ್ಗೆ ಚಂದ್ರಶೇಖರ್‌ರ ಪುತ್ರ ಮತ್ತು ‘ಬರಹ’ ಖ್ಯಾತಿಯ ವಾಸು ಪ್ರತಿಕ್ರಿಯಿಸಿರುವುದು ಹೀಗೆ.. ಅವರ ಪತ್ರ ನಿಮ್ಮ ಗಮನಕ್ಕೆ...
‘ಆವರಣ’ ಕಾದಂಬರಿ ಸಂವಾದ ಕಾರ್ಯಕ್ರಮದಲ್ಲಿ ಸಂಭವಿಸಿದ ದುರದೃಷ್ಟಕರ ಘಟನೆಗೆ ವಿಷಾದ ವ್ಯಕ್ತಪಡಿಸಿ ನಮ್ಮ ಕುಟುಂಬದ ಅನೇಕ ಮಿತ್ರರು ಕನ್ನಡ ಹಿತೈಷಿಗಳು ನನಗೆ ಭಾವಪೂರಿತ ಪತ್ರಗಳನ್ನು ಬರೆದಿದ್ದಾರೆ. ನಿಮಗೆಲ್ಲ ನಮ್ಮ ತಂದೆ ಕೆ.ಟಿ. ಚಂದ್ರಶೇಖರ್ ಹಾಗೂ ನನ್ನ ಕೃತಜ್ಞತೆಗಳು. ಅನೇಕರು ಅಂತರ್ಜಾಲದಲ್ಲಿ ಮಾತ್ರವಲ್ಲದೇ ದೂರವಾಣಿಯಲ್ಲೂ ನಮ್ಮ ತಂದೆಯವರನ್ನು ಸಂಪರ್ಕಿಸಿ ಬೆಂಬಲ ಸೂಚಿಸಿದ್ದಾರೆ.
ಅಂದು ಸಭಾಂಗಣದ ಒಳಗೆ ಕುಳಿತುಕೊಳ್ಳಲು ಸ್ಥಳಾವಕಾಶ ಇಲ್ಲದಿದ್ದುದರಿಂದ ಪ್ರವೇಶ ದ್ವಾರದ ಬಳಿ ಇತರರೊಂದಿಗೆ ನಮ್ಮ ತಂದೆಯೂ ಸಹಾ ನಿಂತಿದ್ದರು. ಹಿಂದೀ ಹಾಡು ಕಿವಿಗೆ ಬಿದ್ದಾಗ ಕನ್ನಡ ಸಾಹಿತ್ಯ ಸಮಾರಂಭದಲ್ಲಿ ಅನ್ಯ ಭಾಷಾ ಬಳಕೆಯ ಔಚಿತ್ಯವೇನು ಎಂದು ಸಹಜವಾಗಿ ಪ್ರತಿಭಟಿಸಿದರು. ಸುತ್ತಲಿದ್ದ ಜನ ತಕ್ಷಣ ಸ್ಪಂದಿಸಿದ್ದರೆ ಕಾರ್ಯಕರ್ತರ ದುಡುಕಿನ ವರ್ತನೆ ಮತ್ತು ಅನಗತ್ಯ ಮಾತುಗಳಿಗೆ ಕಡಿವಾಣ ಹಾಕಿ ಪರಿಸ್ಥಿತಿಯನ್ನು ನಿಯಂತ್ರಿಸಬಹುದಿತ್ತು. ಒಟ್ಟಿನಲ್ಲಿ ಇದೊಂದು ಅಚಾತುರ್ಯ ಘಟನೆ. ಈ ಘಟನೆಯ ನೆಪದಲ್ಲಿ ಒಳಗೆ ಸಭೆಯಲ್ಲಿದ್ದ ಇತರ ಹಿರಿಯ ವ್ಯಕ್ತಿಗಳ ಮೇಲೆ ದೋಷಾರೋಪಣೆ ಮಾಡುವುದು ಸರಿಯಲ್ಲ.
ಈ ಸಣ್ಣ ಆಘಾತದಿಂದ ನಮ್ಮ ಮನೆಯವರು ಹೊರಬಂದಿದ್ದೇವೆ. ಇಂತಹ ಘಟನೆಗಳು ಮುಂದೆ ಮರುಕಳಿಸದಿರಲಿ. ‘‘ನಾವು ಅನ್ಯಭಾಷಾ ವಿರೋಧಿಗಳಲ್ಲ. ಆದರೆ ನಮ್ಮ ರಾಷ್ಟ್ರಭಕ್ತಿಯನ್ನು ವ್ಯಕ್ತಪಡಿಸಲು ಹಿಂದೀ ಪ್ರೇಮವನ್ನು ಮೆರೆಯಬೇಕೆಂಬ ನಿಯಮವೇನಿಲ್ಲ. ಕನ್ನಡಿಗರಾಗಿದ್ದುಕೊಂಡೇ ಭಾರತೀಯರೂ ಆಗಲು ಸಾಧ್ಯ’’ ಎಂಬ
ಸತ್ಯವನ್ನು ತಾಯಿ ಭುವನೇಶ್ವರಿ ನಾವು ಕನ್ನಡಿಗರಿಗೆಲ್ಲಾ ಮನದಟ್ಟು ಮಾಡಿಸಲಿ.











Click it and Unblock the Notifications