3 ಜಿಲ್ಲೆಗಳ ರಚಿಸಲು ಶಿಫಾರಸು: ಸಿಎಂ ಅಸ್ತು ಅನ್ನುವರೇ?
ಬೆಂಗಳೂರು : ಕರ್ನಾಟಕ ರಾಜ್ಯಕ್ಕೆ 3--4 ಹೊಸ ಜಿಲ್ಲೆಗಳನ್ನು ಸೇರ್ಪಡೆ ಮಾಡುವಲ್ಲಿ ಯಾವುದೇ ತೊಂದರೆ ಇಲ್ಲ ಎಂದು ರಾಜ್ಯ ಸರ್ಕಾರ ಹೇಳಿದೆ. ಸರ್ಕಾರದ ಜಿಲ್ಲಾ ರಚನಾ ಕಾರ್ಯ ಜಾರಿಗೆ ಬಂದರೆ, ರಾಜ್ಯದ ಜಿಲ್ಲೆಗಳ ಪಟ್ಟಿ 28ರಿಂದ 31-32ಕ್ಕೆ ಏರುವ ಸಂಭವವಿದೆ.
ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ರಚಿಸಿದ್ದ ತಜ್ಞರ ಸಮಿತಿ, ಜಿಲ್ಲಾ ರಚನೆಗೆ ಸಲಹೆ ನೀಡಿದೆ. ಹೊಸ ಜಿಲ್ಲೆಗಳ ರಚನೆ ಮಾಡಲು ಬೇಕಾದ ಮೂಲಭೂತ ಸೌಕರ್ಯ, ಜನರ ಬೇಡಿಕೆ ಹಾಗೂ ಅವಶ್ಯಕತೆಗಳ ಬಗ್ಗೆ ಸಮಿತಿ ಅಧ್ಯಯನ ನಡೆಸಿದೆ.
ಹೊಸ ಜಿಲ್ಲೆಗಳು ಯಾವುವು? : ಗುಲ್ಬರ್ಗಾ, ಬೆಳಗಾವಿಯಿಂದ ಎರಡು ಜಿಲ್ಲೆಗಳು ಹಾಗೂ ಬೆಂಗಳೂರು ಗ್ರಾಮಾಂತರ ಹಾಗೂ ಕೋಲಾರ ಜಿಲ್ಲೆಗಳನ್ನು ಪ್ರತ್ಯೇಕಿಸಿ ಚಿಕ್ಕಬಳ್ಳಾಪುರ ಜಿಲ್ಲೆ ಮಾಡಲು ಸಮಿತಿ ಸಲಹೆ ನೀಡಿದೆ. ಸರ್ಕಾರ ಈ ಬಗ್ಗೆ ಗಮನ ಹರಿಸಿದರೆ, ಇನ್ನು ಮೂರು ತಿಂಗಳಲ್ಲಿ ಹೊಸ ಜಿಲ್ಲೆಗಳು ಅಸ್ತಿತ್ವಕ್ಕೆ ಬರಲಿವೆ.
ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶ್ರೇಣಿಗೆ ಸೇರಿದ ನಿವೃತ್ತ ಅಧಿಕಾರಿಗಳಾದ ಚಿರಂಜೀವಿ ಸಿಂಗ್, ಬಾಲಸುಬ್ರಮಣಿಯನ್ ಹಾಗೂ ಕೆ.ವಿ. ಇರ್ನಿರಾಯ ಅವರು ಸಮಿತಿಯಲ್ಲಿದ್ದಾರೆ. ಈ ಸಮಿತಿ ವರದಿಯ ಪ್ರಕಾರ, ಪ್ರತಿ ಜಿಲ್ಲೆ ರಚನೆ ಮಾಡಲು ಸರ್ಕಾರ ಸುಮಾರು 15 ಕೋಟಿ ರೂ. ಖರ್ಚುಮಾಡಬೇಕಾಗುತ್ತದೆ. ಗ್ರಾಮ, ತಾಲೂಕು ಹಾಗೂ ಜಿಲ್ಲಾ ಪಂಚಾಯತಿ ರಚನೆ, ಜಿಲ್ಲಾ ನ್ಯಾಯಾಲಯ ಹಾಗೂ ಇನ್ನಿತರ ಕಚೇರಿಗಳ ರಚನೆಯ ಜತೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕಾಗುತ್ತದೆ.
ಏನಾದರೂ ತೊಡಕು? : ಬೆಂಗಳೂರು ಗ್ರಾಮಾಂತರ ಹಾಗೂ ಕೋಲಾರ ಜಿಲ್ಲೆಗಳನ್ನು ಪ್ರತ್ಯೇಕಿಸಿ, ಚಿಕ್ಕಬಳ್ಳಾಪುರ ಜಿಲ್ಲೆ ಮಾಡಲು ಯಾವುದೇ ಅಡೆತಡೆಗಳಿಲ್ಲ.
ಆದರೆ ಬೆಳಗಾವಿ ಹಾಗೂ ಗುಲ್ಬರ್ಗ ಜಿಲ್ಲೆಗಳನ್ನು ಒಡೆದು, ಹೊಸ ಜಿಲ್ಲೆ ಮಾಡುವಲ್ಲಿ ತೊಂದರೆಗಳಿವೆ ಎಂದು ಹೇಳಲಾಗುತ್ತಿದೆ. ಎಲ್ಲಾ ಸರಿಯಾಗಿದ್ದರೆ 6-8 ವರ್ಷಗಳ ಹಿಂದೆಯೆ ಇನ್ನೆರಡು ಜಿಲ್ಲೆಗಳನ್ನು ಕಾಣಬಹುದಿತ್ತು. ಹಿಂದಿನ ಮುಖ್ಯಮಂತ್ರಿ ಧರ್ಮಸಿಂಗ್ ಶಹಾಪುರವನ್ನು ಜಿಲ್ಲೆ ಮಾಡಲು ಹೊರಟರೆ, ಮಲ್ಲಿಕಾರ್ಜುನ ಖರ್ಗೆ ಅವರು ಯಾದಗಿರಿಗೆ ಜಿಲ್ಲೆ ಪಟ್ಟ ಕೊಡಲು ಮುಂದಾಗಿದ್ದರು. ಕಡೆಗೆ, ಒಮ್ಮತ ಮೂಡದೇ ಜಿಲ್ಲೆಗಳ ರಚನಾ ಕಾರ್ಯ ನೆನೆಗುದಿಗೆ ಬಿದ್ದಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications