ಅಂಬಿಗೆ ಕಾಂಗ್ರೆಸ್ ಫಸ್ಟ್, ರಾಜ್ಯ ನೆಕ್ಸ್ಟ್ ! ಇಲ್ಲಿದೆ ಪ್ರೂಫ್!
ಬೆಂಗಳೂರು : ಕರ್ನಾಟಕದ ನೇತಾರರ ನಿಜಬಣ್ಣ ಬಯಲಾಯಿತು, ಬಟ್ಟಬಯಲಾಯಿತು ! ನಮ್ಮ ನೇತಾರರಿಗೆ, ವಿಶೇಷವಾಗಿ ರಾಜಕೀಯಪಕ್ಷಗಳಲ್ಲಿ ಇರುವವರಿಗೆ ರಾಜಕೀಯವೇ ಅಂತಿಮ. ಉಳಿದದ್ದೆಲ್ಲ ಗೌಣ, ನೆಪಮಾತ್ರ, ನಾಟಕ, ಬಯಲು ನಾಟಕ.
ದೈನಂದಿನ ರಾಜಕೀಯದಲ್ಲಿನ ಎಲ್ಲ ಮಟ್ಟುಗಳು ಓಟುಗಳ ಕಡೆ ಮಾತ್ರ ಓಡುವುದು ಸರ್ವವಿದಿತ. ಆದರೆ, ಸಮಸ್ತ ಕರ್ನಾಟಕ ಕಾವೇರಿ ವಿವಾದದಲ್ಲಿ ಮುಳುಗಿರುವಾಗಲೂ, ಕರ್ನಾಟಕದ ಸ್ವಾಭಿಮಾನದ ಪ್ರಶ್ನೆ ಉಧ್ಭವಿಸಿರುವಾಗಲೂ ನೀರಿಗಾಗಿ ನಡೆಯುತ್ತಿರುವ ಹೋರಾಟದಲ್ಲೂ ರಾಜಕೀಯದ ಬೇಳೆ ಬೇಯಿಸಿಕೊಳ್ಳುವ ಪ್ರಜಾಪ್ರತಿನಿಧಿಗಳ ಸ್ವಾರ್ಥಕ್ಕೆ ಏನನ್ನೋಣ?.
ಬುಧವಾರ ಲೋಕಸಭಾ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ ಅಂಬರೀಶ್, ಕಾವೇರಿ ವಿವಾದಕ್ಕೋಸ್ಕರ ಕರ್ನಾಟಕದ ಪರವಾಗಿ ನಿಂತಿದ್ದಾರೆಂಬ ಭರವಸೆ ಸುಳ್ಳಾಯಿತು. ಅವರ ರಾಜೀನಾಮೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಏಳಿಗೆ ಎನ್ನುವುದು ಜಗಜ್ಜಾಹೀರಾಯಿತು.

ರೀಲ್ ಹೀರೋ : ಕಾವೇರಿ ಅನ್ಯಾಯ ಪ್ರತಿಭಟಿಸಿ ನಾಡಿನ ಹಿತಕ್ಕಾಗಿ ರಾಜೀನಾಮೆ ನೀಡಿರುವುದಾಗಿ ಹೇಳಿಕೆ ನೀಡಿದ್ದ ಅಂಬರೀಷ್, ತಮ್ಮ ರಾಜೀನಾಮೆ ಪತ್ರದಲ್ಲಿ ನಿಜಕಾರಣವನ್ನು ಪ್ರಕಟಿಸಿದ್ದಾರೆ. ನನ್ನ ರಾಜೀನಾಮೆಯಿಂದ ಕರ್ನಾಟಕದಲ್ಲಿ ಕಾಂಗ್ರೆಸ್ ವರ್ಚಸ್ಸು ಹೆಚ್ಚುತ್ತದೆ... ನಮ್ಮೆಲ್ಲರ ನೆಲೆ ಭದ್ರವಾಗುತ್ತದೆ ಎಂದವರು ಪತ್ರದಲ್ಲಿ ಬರೆದಿದ್ದಾರೆ. ಮನದೊಳಗಿನ ರಾಜಕೀಯ ಲೆಕ್ಕಾಚಾರವನ್ನು ಬಿಂಬಿಸಿದ್ದಾರೆ.
ಮಾನ್ಯ ಅಂಬರೀಶ್ ಅವರು ತಮ್ಮ ನಾಯಕಿ ಸೋನಿಯ ಗಾಂಧೀ ಅವರಿಗೆ ಬರೆದ ರಾಜಿನಾಮೆ ಪತ್ರದ ನಕಲು ಇಲ್ಲಿದೆ. ಅವರ ಒಲವು-ನಿಲವು ಇಲ್ಲಿ ಸುಸ್ಪಷ್ಟವಾಗಿದೆ.
ಜೈ ಕರ್ನಾಟಕ...
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications